ಮಹಾರಾಷ್ಟ್ರ ಸರಕಾರದಲ್ಲಿ ಭಿನ್ನಮತ: ಇಂದು ಮೈತ್ರಿಪಕ್ಷಗಳ ಜೊತೆ ಸಿಎಂ ಉದ್ಧವ್ ಠಾಕ್ರೆ ಸಭೆ

Update: 2020-05-27 06:44 GMT

ಮುಂಬೈ/ಹೊಸದಿಲ್ಲಿ, ಮೇ 27: ಮಹಾರಾಷ್ಟ್ರ ಮೈತ್ರಿ ಸರಕಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ದಟ್ಟ ವದಂತಿಯ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಮೈತ್ರಿಕೂಟದ ನಾಯಕರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ.

 ಸೋಮವಾರ ಸಂಜೆ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆ ಮಾತೋಶ್ರೀ ನಿವಾಸದಲ್ಲಿ ದೀರ್ಘಕಾಲ ಚರ್ಚಿಸಿದ್ದು, ಆರು ತಿಂಗಳ ಮೈತ್ರಿ ಸರಕಾರದ ಅಳಿವು-ಉಳಿವಿನ ಬಗ್ಗೆ ಊಹಾಪೋಹ ಎದ್ದಿತ್ತು. ಸರಕಾರದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಶಿವಸೇನೆ ಹಾಗೂ ಎನ್‌ಸಿಪಿ ಸ್ಪಷ್ಟಪಡಿಸಿದ್ದವು.

 ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರಕ್ಕೆ ಕೇವಲ ಬೆಂಬಲ ನೀಡುವ ಮೂಲಕ ಪೋಷಕ ಪಾತ್ರ ನಿರ್ವಹಿಸುತ್ತಿದೆ ಎಂದು ಮಂಗಳವಾರ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದರು. ರಾಹುಲ್ ಹೇಳಿಕೆಯ ಬಳಿಕ ರಾಜ್ಯ ರಾಜಕೀಯ ಬಿಕ್ಕಟ್ಟು ಮತ್ತೊಂದು ರೂಪ ಪಡೆದಿದೆ.

ಇತ್ತೀಚೆಗೆ ತಾನು ನಡೆಸಿದ್ದ ಸರಣಿ ಸಭೆಯು ಮೈತ್ರಿ ಸರಕಾರದಲ್ಲಿ ಮುಂದುವರಿಯಲು ಮರು ಚಿಂತಿಸುವ ಭಾಗವಾಗಿದೆ ಎನ್ನುವುದನ್ನು ನಿರಾಕರಿಸಿದ ಶರದ್ ಪವಾರ್, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಸಹನೆಯಿಂದಿರಬೇಕು ಎಂದು ಸಲಹೆ ನೀಡಿದ್ದರು. ಫಡ್ನವಿಸ್ ಹಾಗೂ ಅವರ ಬಿಜೆಪಿ ಪಕ್ಷ ರಾಜ್ಯ ಸರಕಾರ ಉರುಳಿಸಲು ಯತ್ನಿಸುತ್ತಿರುವುದನ್ನು ಉಲ್ಲೇಖಿಸಿದ್ದರು.

"ಮಹಾರಾಷ್ಟ್ರ ಸರಕಾರಕ್ಕೆ ಯಾವುದೇ ಭೀತಿಯಿಲ್ಲ. ಎಲ್ಲ ಶಾಸಕರು ನಮ್ಮೆಂದಿಗೆ ಇದ್ದಾರೆ.ಈ ಬಾರಿ ನಮ್ಮನ್ನು ಬೇರ್ಪಡಿಸುವ ಕೆಲಸ ಮಾಡಲು ಪ್ರಯತ್ನಿಸಿದರೆ ಜನರೇ ಪಾಠ ಕಲಿಸುತ್ತಾರೆ''ಎಂದು ಪವಾರ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News