ಸೌದಿಯಿಂದ ತಕ್ಷಣ ಮಂಗಳೂರಿಗೆ ವಿಮಾನ ವ್ಯವಸ್ಥೆ ಮಾಡಲು ಒತ್ತಾಯಿಸಿ ಸಂಸದ ನಳಿನ್ ಜೊತೆ ಅನಿವಾಸಿ ಭಾರತೀಯರ ವೀಡಿಯೊ ಸಭೆ

Update: 2020-05-28 20:18 GMT

ರಿಯಾದ್ : ವಿವಿಧ ಗಲ್ಫ್ ದೇಶಗಳಲ್ಲಿ ಕೊರೋನ ಲಾಕ್ ಡೌನ್ ನಿಂದ ಅತಂತ್ರಗೊಂಡು ಮರಳಲು ಕಾಯುತ್ತಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ವಿವಿಧ ಗಲ್ಫ್ ದೇಶಗಳ ಸಂಘ ಸಂಸ್ಥೆಗಳ ಮುಖಂಡರು ಗುರುವಾರ ಸಂಜೆ ದ.ಕ. ಲೋಕಸಭಾ ಸಂಸದ ಹಾಗು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ವೀಡಿಯೊ ಸಂವಾದ ನಡೆಸಿದರು. 

ಸೌದಿ ಕನ್ನಡ ಸಂಘದ ರವಿ ಶೆಟ್ಟಿ ಅವರು ಈ ವೀಡಿಯೊ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೌದಿಯ ವಿವಿಧ ಪ್ರದೇಶಗಳು, ಯುಎಇ, ಬಹರೈನ್ ಮತ್ತಿತರ ಗಲ್ಫ್ ರಾಷ್ಟ್ರಗಳ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿ ಅಲ್ಲಿನ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನ ಸೆಳೆದರು. 

ಎಲ್ಲ ಗಲ್ಫ್ ದೇಶಗಳಲ್ಲಿ ತಾಯ್ನಾಡಿಗೆ ತುರ್ತಾಗಿ ಮರಳಲು ಕಾಯುತ್ತಿರುವ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಗಲ್ಫ್ ಕನ್ನಡಿಗರಿಗೆ ರಾಜ್ಯ ಸರಕಾರ ತಕ್ಷಣ ಸ್ಪಂದಿಸಿ ಈ ಎಲ್ಲಾ ದೇಶಗಳಿಂದ ಅವರಿಗೆ ಮರಳಲು ವಿಮಾನಗಳ ವ್ಯವಸ್ಥೆಯನ್ನು ಆದ್ಯತೆಯ ಮೇರೆಗೆ ಮಾಡಬೇಕು ಎಂದು ಸಂಸದರಲ್ಲಿ ಅವರು ಆಗ್ರಹಿಸಿದರು. ಇದಕ್ಕೆ ನಳೀನ್ ಕುಮಾರ್ ಕಟೀಲ್ ಅವರು ಸ್ಪಂದಿಸಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಯುಎಇ ಕರ್ನಾಟಕ ಎನ್ ಆರ್ ಐ ಫೋರಮ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಯುಎಇ ಕರ್ನಾಟಕ ಸಂಘದ ಸರ್ವೋತ್ತಮ ಶೆಟ್ಟಿ, ಕೋಆರ್ಡಿನೇಟರ್ ಅವಿಕ್ಷಿತ್ ರೈ, ಕತರ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ರವಿ ಶೆಟ್ಟಿ, ರಿಯಾದ್ ಕರ್ನಾಟಕ ಎನ್ ಆರ್ ಐ ಫೋರಮ್ ನ ಸಂತೋಷ್ ಶೆಟ್ಟಿ, ದಮಾಮ್ ಕರ್ನಾಟಕ ಎನ್ ಆರ್ ಐ ಪೋರಮ್ ನ ಅಧ್ಯಕ್ಷ ಝಕರಿಯಾ ಬಜ್ಪೆ, ಬಹರೈನ್ ಇಂಡಿಯನ್ ಓವರ್ಸೀಸ್ ಅಧ್ಯಕ್ಷ ಮನ್ಸೂರ್ ಬಹರೈನ್, ಎನ್ ಎಸ್ ಶೆಟ್ಟಿ ಕುವೈತ್, ಕನ್ನಡ ಸಂಘ ಬಹರೈನ್ ಪ್ರದೀಪ್ ಶೆಟ್ಟಿ, ಹೆಬ್ಬಾಗಿಲು ಕತರ್, ಕರುನಾಕರ್ ರಾವ್, ಶಶಿಧರ್ ಶೆಟ್ಟಿ ಒಮನ್, ಮನ್ಸೂರ್ ಬಹರೈನ್, ಕನ್ನಡ ಸಂಘ ಕುವೈತ್ ನ ರಾಜೇಶ್, ರಮೇಶ್ ಭಂಡಾರಿ, ಎಂ ಇ ಮುಳೂರ್, ಸುನೀಲ್ ಕುಲಕರ್ನಿ ಮತ್ತಿತರು ಈ ವೀಡಿಯೊ ಸಂವಾದಲ್ಲಿ ಭಾಗವಹಿಸಿ, ಮಾತನಾಡಿದರು.

ಈಗಾಗಲೇ ಹಲವಾರು ಬಾರಿ ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರಗಳಿಗೆ ಮನವಿ ಮಾಡಿದ್ದರೂ ಸೌದಿ ಯಿಂದ ಈವರೆಗೆ ವಿಮಾನವನ್ನು ಕನ್ನಡಿಗರಿಗೆ ನಿಯೋಜಿಸಿಲ್ಲ. ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಈ ಸಂದರ್ಭದಲ್ಲಿ ಸಂಸದರನ್ನು ಮನವಿ ಮಾಡಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News