ಚೀನಾ ಜೊತೆ ಗಡಿ ಸಂಘರ್ಷ: ಮೋದಿ ಜತೆ ಮಾತನಾಡಿದ ಟ್ರಂಪ್ ಹೇಳಿದ್ದೇನು?

Update: 2020-05-29 04:01 GMT

ವಾಷಿಂಗ್ಟನ್, ಮೇ 29: ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಗಡಿ ಸಂಘರ್ಷದ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ಜತೆ ದೂರವಾಣಿ ಮೂಲಕ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ವಿವಾದದ ಹಿನ್ನೆಲೆಯಲ್ಲಿ ಮೋದಿ ಒಳ್ಳೆಯ ಮನಸ್ಥಿತಿಯಲ್ಲಿ ಇದ್ದಂತಿಲ್ಲ ಎಂದು ಹೇಳಿದ್ದಾರೆ.

ಉಭಯ ರಾಜ್ಯಗಳ ಗಡಿ ವಿಚಾರದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದರೂ, ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆಗೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹಾಗೂ ಚೀನಾ ನಡುವೆ ದೊಡ್ಡ ಸಂಘರ್ಷ ಉಂಟಾಗಿದೆ ಎಂದು ಹೇಳಿದರು. ನಿಮ್ಮ ಪ್ರಧಾನಿಯನ್ನು ನಾನು ಇಷ್ಟಪಡುತ್ತೇನೆ. ಅವರೊಬ್ಬ ಜಂಟಲ್‌ಮನ್ ಎಂದು ಟ್ರಂಪ್ ಹೊಗಳಿದರು.

ಭಾರತ ಮತ್ತು ಚೀನಾ ನಡುವಿನದ್ದು ದೊಡ್ಡ ಸಂಘರ್ಷ. ಎರಡೂ ದೇಶಗಳೂ ತಲಾ 1.4 ಶತಕೋಟಿ ಜನಸಂಖ್ಯೆ ಹೊಂಧಿವೆ. ಎರಡೂ ದೇಶಗಳ ಸೇನೆ ಬಲಿಷ್ಠವಾಗಿದೆ. ಭಾರತ ಸಮಾಧಾನದಿಂದ ಇಲ್ಲ; ಬಹುಶಃ ಚೀನಾಕ್ಕೂ ಖುಷಿ ಇದ್ದಂತಿಲ್ಲ ಎಂದು ಟ್ರಂಪ್ ವಿಶ್ಲೇಷಿಸಿದರು.

ನಾನು ಮೋದಿ ಜತೆಗೆ ಮಾತನಾಡಿದ್ದೇನೆ; ಚೀನಾ ಜತೆಗಿನ ಸಂಘರ್ಷ ವಿಚಾರದಲ್ಲಿ ಅವರು ಒಳ್ಳೆಯ ಮೂಡ್‌ನಲ್ಲಿ ಇದ್ದಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಮಧ್ಯಸ್ಥಿಕೆಯಿಂದ ಸಹಾಯವಾಗುತ್ತದೆ ಎಂದು ಉಭಯ ದೇಶಗಳು ಅಭಿಪ್ರಾಯಪಟ್ಟರೆ, ಮಧ್ಯಸ್ಥಿಕೆಗೆ ಸಿದ್ಧ ಎಂದರು.

ಈ ಮಧ್ಯೆ ಚೀನಾ ಜತೆಗಿನ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News