ಶ್ರಮಿಕ್ ರೈಲಿನಲ್ಲಿ ವಲಸಿಗ ಕಾರ್ಮಿಕರ ಸಾವು ಸಣ್ಣ ಘಟನೆ: ಬಂಗಾಳ ಬಿಜೆಪಿ ಅಧ್ಯಕ್ಷ ಘೋಷ್

Update: 2020-05-29 06:20 GMT

ಕೋಲ್ಕತಾ, ಮೇ 29: "ಶ್ರಮಿಕ್ ವಿಶೇಷ ರೈಲಿನಲ್ಲಿ ಮನೆಗೆ ಮರಳುವಾಗ ವಲಸಿಗ ಕಾರ್ಮಿಕರ ಸಾವು ಒಂದು ಸಣ್ಣ ಹಾಗೂ ಪ್ರತ್ಯೇಕ ಘಟನೆಯಾಗಿದೆ. ಇದಕ್ಕಾಗಿ ರೈಲ್ವೆ ಇಲಾಖೆಯನ್ನು ನಿಂದಿಸುವುದು ಸರಿಯಲ್ಲ''ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ಹೇಳಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ತಮ್ಮೂರಿಗೆ ತೆರಳುತ್ತಿರುವ ಲಕ್ಷಾಂತರ ವಲಸೆ ಕಾರ್ಮಿಕರಿಗೆ ವಿಪರೀತ ಉಷ್ಣಾಂಶ, ಹಸಿವು ಹಾಗೂ ನಿರ್ಜಲೀಕರಣವು ತೀವ್ರವಾಗಿ ಬಾಧಿಸುತ್ತಿದೆ. ಸೋಮವಾರದ ಬಳಿಕ ಶ್ರಮಿಕ್ ಸ್ಪೆಷಲ್ ರೈಲುಗಳಲ್ಲಿ ಮಕ್ಕಳು ಸಹಿತ 9 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

"ಕೆಲವು ದುರದೃಷ್ಟಕರ ಘಟನೆಗಳು ನಡೆದಿವೆ. ಆದರೆ,ಇದಕ್ಕಾಗಿ ಕೇವಲ ರೈಲ್ವೆ ಇಲಾಖೆಯನ್ನು ದೂಷಿಸುವುದು ಸರಿಯಲ್ಲ. ವಲಸಿಗರನ್ನು ಅವರ ಊರಿಗೆ ತಲುಪಿಸಲು ಉತ್ತಮ ಕೆಲಸ ಮಾಡುತ್ತಿದೆ. ಕೆಲವು ಸಾವುಗಳು ಸಂಭವಿಸುತ್ತವೆ. ಇದು ಪ್ರತ್ಯೇಕ ಘಟನೆಗಳಾಗಿವೆ. ಪ್ರಯಾಣಿಕರಿಗೆ ರೈಲ್ವೆ ಹೇಗೆ ಉತ್ತಮ ಸೇವೆ ನೀಡುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನವಿದೆ. ಕೆಲವು ಸಣ್ಣಪುಟ್ಟ ಘಟನೆ ನಡೆಯುತ್ತದೆ. ಇದರರ್ಥ ರೈಲ್ವೇಸ್‌ನ್ನು ಮುಚ್ಚಿಬಿಡಬೇಕೆನ್ನುವುದಲ್ಲ'' ಎಂದು ಬಿಜೆಪಿಯ ಸಂಸದರೂ ಆಗಿರುವ ಘೋಷ್ ಸುದ್ದಿಗಾರರಿಗೆ ತಿಳಿಸಿದರು.

ಘೋಷ್ ಹೇಳಿಕೆಗೆ ಪಶ್ಚಿಮಬಂಗಾಳದ ಆಡಳಿತರೂಢ ಟಿಎಂಸಿ ಹಾಗೂ ವಿಪಕ್ಷ ಸಿಪಿಎಂ ತೀವ್ರ ಟೀಕಾಪ್ರಹಾರ ನಡೆಸಿವೆ. "ಕಾರ್ಮಿಕರ ನೋವಿಗೆ ಬಿಜೆಪಿ ನಾಯಕ ಹೆಚ್ಚು ಸೂಕ್ಷ್ಮವಾಗಿ ವರ್ತಿಸಬೇಕೆಂದು ಸಲಹೆ ನೀಡಿವೆ.

ಕೇಂದ್ರ ಸರಕಾರ ಕೋವಿಡ್-19 ಬಿಕ್ಕಟ್ಟು ಹಾಗೂ ಲಾಕ್‌ಡೌನ್‌ನ್ನು ಸರಿಯಾಗಿ ನಿಭಾಯಿಸದ ಕಾರಣ ಕಾರ್ಮಿಕರು ಇಷ್ಟೊಂದು ಸಮಸ್ಯೆ ಎದುರಿಸುವಂತಾಗಿದೆ. ಬಹಳಷ್ಟು ಜನರು ಮೃತಪಟ್ಟಿದ್ದಾರೆ. ಏನೂ ಆಗಲಿಲ್ಲ ಎಂಬಂತೆ ಬಿಜೆಪಿ ನಾಯಕರು ಅಹಂನಿಂದ ವರ್ತಿಸುತ್ತಿದ್ದಾರೆ. ದಿಲಿಪ್ ಘೋಷ್ ಅವರೇ ನಮ್ಮತ್ತ ಬೆಟ್ಟು ಮಾಡುವ ಮೊದಲು ಸೂಕ್ಷ್ಮವಾಗಿ ವರ್ತಿಸಿ ಹಾಗೂ ಮಾತನಾಡಿ''ಎಂದು ಟಿಎಂಸಿ ನಾಯಕ ಹಾಗೂ ಸಂಸದ ಸೌಗತ ರಾಯ್ ಹೇಳಿದ್ದಾರೆ.

ರಾಯ್ ಹೇಳಿಕೆಗೆ ಧ್ವನಿಗೂಡಿಸಿದ ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯ ಮುಹಮ್ಮದ್ ಸಲೀಂ,"ಬಿಜೆಪಿಯ ಆಡಳಿತದಲ್ಲಿ ಎಲ್ಲವೂ ಒಳ್ಳೆಯದಕ್ಕಾಗಿ ನಡೆಯುತ್ತದೆ ಎಂದು ಹೇಳುವ ಬಿಜೆಪಿಯ ನಂಬಿಕೆ ಜಗತ್ತಿನಲ್ಲಿ ಉಳಿಯಲು ಘೋಷ್‌ರಂತಹ ನಾಯಕರು ಬಯಸುತ್ತಾರೆ. ವಲಸಿಗ ಕಾರ್ಮಿಕರ ಸಮಸ್ಯೆಯು ಮೋದಿ ಸರಕಾರಕ್ಕೆ ಮಾನವ ಜೀವ ಉಳಿಸಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸುತ್ತಿದೆ. ಕೇಂದ್ರ ಸರಕಾರವು ಬಿಕ್ಕಟ್ಟನ್ನು ತಪ್ಪಾಗಿ ನಿರ್ವಹಿಸಿದ ಬಗ್ಗೆ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು'' ಎಂದು ಸಲೀಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News