ಬಿಬಿಎಂಪಿ ಸದಸ್ಯರೋರ್ವರಿಗೆ ಕೊರೋನ ಪಾಸಿಟಿವ್: 15ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ಗೆ

Update: 2020-05-30 16:55 GMT

ಬೆಂಗಳೂರು, ಮೇ 30: ಬಿಬಿಎಂಪಿ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ಅವರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆ ಇಲ್ಲಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕು ಹಿನ್ನೆಲೆ ಶನಿವಾರ ಇಮ್ರಾನ್ ಪಾಷಾ ನಿವಾಸಕ್ಕೆ ತೆರಳಿದ ಆರೋಗ್ಯ ಅಧಿಕಾರಿಗಳು, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದುರು. ಇದಕ್ಕೂ ಮೊದಲು ಆಸ್ಪತ್ರೆಗೆ ತೆರಳಲು ಇಮ್ರಾನ್ ಪಾಷಾ ನಿರಾಕರಿಸಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿರುವುದಾಗಿ ವರದಿಯಾಗಿದೆ.

ರಾಜ್ಯದಲ್ಲಿ ಜನಪ್ರತಿನಿಧಿಯೊಬ್ಬರಲ್ಲಿ ಸೋಂಕು ದೃಢಪಟ್ಟಿರುವುದು ಇದೇ ಮೊದಲಾಗಿದ್ದು, ಪ್ರಸ್ತುತ ಇಮ್ರಾನ್ ಪಾಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಇಮ್ರಾನ್ ಪಾಷಾ ಅವರೊಂದಿಗೆ ಸಂಪರ್ಕದಲ್ಲಿದ್ದ ಅವರ ಪತ್ನಿ, ಇಬ್ಬರು ಮಕ್ಕಳು, ಕಾರು ಚಾಲಕ, ಮನೆ ಕೆಲಸದ ಸಿಬ್ಬಂದಿ, ಬೆಂಬಲಿಗರು ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಪಾದರಾಯನಪುರ ಸೀಲ್‍ಡೌನ್ ಮಾಡಿದ ಈ ಪ್ರದೇಶದಲ್ಲಿ ಓಡಾಟ, ಬಡವರಿಗೆ ಆಹಾರ  ಕಿಟ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಹೀಗಾಗಿ ಸೋಂಕು ತಗುಲಿರಬಹುದು ಎಂದು ಹೇಳಲಾಗುತ್ತಿದೆ.

ಅಧಿಕಾರಿಗಳಲ್ಲೂ ಭೀತಿ: ಪಾದರಾಯನಪುರದ ವಾರ್ಡ್‍ನಲ್ಲಿ ಕೊರೋನ ಸೋಂಕು ನಿಯಂತ್ರಿಸುವ ಕುರಿತು ಬಿಬಿಎಂಪಿ ಪಶ್ಚಿಮ ವಲಯದ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಆರೋಗ್ಯ ಅಧಿಕಾರಿಗಳು, ಜೆಜೆ ನಗರದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರು ಕೂಡ ಪಾಲ್ಗೊಂಡಿದ್ದರು. ಕಳೆದೊಂದು ವಾರದಲ್ಲಿ ಇಮ್ರಾನ್ ಅವರು ಮೂರು ಬಾರಿ ಬಿಬಿಎಂಪಿ ಕೇಂದ್ರ ಕಚೇರಿಗೂ ಭೇಟಿ ನೀಡಿದ್ದು, ಇದೀಗ ಅಧಿಕಾರಿಗಳಲ್ಲಿಯೂ ಸೋಂಕಿನ ಭೀತಿ ಶುರುವಾಗಿದೆ.

ವಿಶೇಷ ವಾರ್ಡ್ ಬೇಡ: ಇಮ್ರಾನ್ ಪಾಷಾ

ಕೊರೋನ ಸೋಂಕು ಹಿನ್ನೆಲೆ ಯಾವುದೇ ರೀತಿಯ ವಿಶೇಷ ವಾರ್ಡ್ ಬೇಡ. ಎಲ್ಲರಂತೆ ಸಾಮಾನ್ಯ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದು ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ತಿಳಿಸಿರುವುದಾಗಿ ವರದಿಯಾಗಿದೆ.

ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಅವರು, ಜನರಲ್ ವಾರ್ಡ್‍ನಲ್ಲಿ ಚಿಕಿತ್ಸೆ ಮುಂದುವರಿಸುವಂತೆ ಕೋರಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News