ತೆಲಂಗಾಣ: ಬೀದಿ ನಾಯಿಗಳ ದಾಳಿಗೆ ಒಳಗಾದ ಬಾಲಕಿ ಚಿಕಿತ್ಸೆ ಸಿಗದೆ ಸಾವು

Update: 2020-05-31 05:50 GMT

ತೆಲಂಗಾಣ, , ಮೇ 31: ತೆಲಂಗಾಣದಲ್ಲಿ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಮೆಡ್‌ಚಾಲ್ ಜಿಲ್ಲೆಯ ಆರರ ಹರೆಯದ ಬಾಲಕಿ ಶನಿವಾರ ಬೆಳಗ್ಗೆ ಮನೆಯ ಹೊರಗೆ ಆಡುತ್ತಿದ್ದಾಗ ನಾಲ್ಕರಿಂದ ಐದು ಬೀದಿನಾಯಿಗಳ ಗುಂಪು ದಾಳಿ ನಡೆಸಿದ್ದವು. ಗಾಯಗೊಂಡಿದ್ದ ಬಾಲಕಿಯನ್ನು ನಗರದ ಐದು ಆಸ್ಪತ್ರೆಗಳಿಗೆ ಕರೆದೊಯ್ದರೂ ಸರಿಯಾದ ಚಿಕಿತ್ಸೆ ನೀಡದ ಕಾರಣ ಬಾಲಕಿ ಮೃತಪಟ್ಟಿದೆ.

 ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಮೊದಲಿಗೆ ಆದಿತ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಎರಡು ಗಂಟೆಗಳ ಬಳಿಕ ಬಾಲಕಿಯನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು. ಅಂಕುರ್ ಆಸ್ಪತ್ರೆಗೆ ತೆರಳಿದ ಬಳಿಕ ಬಾಲಕಿಗೆ ಮೂರು ಗಂಟೆ ಚಿಕಿತ್ಸೆ ನೀಡಿ ಯಶೋಧಾ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಯಿತು. ಅಲ್ಲಿ ಕೂಡ ಬಾಲಕಿಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ಆ ಬಳಿಕ ಬಾಲಕಿಯ ಹೆತ್ತವರು ಫಿವರ್ ಹಾಸ್ಪಿಟಲ್‌ಗೆ ಕರೆದೊಯ್ದರು. ಅಲ್ಲಿಂದ ಬಾಲಕಿಯನ್ನು ನಿಲೊಫೆರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಸಂಜೆ ವೇಳೆಗೆ ಬಾಲಕಿ ಮೃತಪಟ್ಟಿದೆ.

ನಿರ್ಲಕ್ಷ ವಹಿಸಿದ ಬೊಡುಪಾಲ್ ಮುನ್ಸಿಪಲ್ ಕಾರ್ಪೊರೇಶನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕು ಕಾರ್ಯಕರ್ತ ಅಚ್ಯುತ ರಾವ್ ಆಗ್ರಹಿಸಿದ್ದಾರೆ. ಬಾಲಕಿಯ ಅಂತ್ಯಕ್ರಿಯೆಗೆ ಮಹಾನಗರಪಾಲಿಕೆ ಹಣಕಾಸು ನೆರವು ನೀಡದೇ ಸೋಮವಾರ ಬನ್ನಿ ಎಂದು ಹೇಳಿದೆ ಎಂದು ರಾವ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News