ಕೊರೋನ ವೈರಸ್‌ನಿಂದ ಬಾಧಿತ ಬಡವರ, ಕಾರ್ಮಿಕರ ನೋವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ: ಪ್ರಧಾನಿ ಮೋದಿ

Update: 2020-05-31 07:29 GMT

ಹೊಸದಿಲ್ಲಿ, ಮೇ 31: ಕೊರೋನ ವೈರಸ್ ಬಿಕ್ಕಟ್ಟಿನಿಂದ ಬಡವರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಅವರ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರವಿವಾರ 'ಮನ್‌ ಕೀ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಸಾಂಕ್ರಾಮಿಕ ಕಾಯಿಲೆಯಿಂದ ಎಲ್ಲ ವರ್ಗಗಳ ಜನರು ತೊಂದರೆಗೀಡಾಗಿದ್ದಾರೆ. ಆದರೆ, ಬಡವರು ಹೆಚ್ಚು ಸಮಸ್ಯೆಗೆ ಸಿಲುಕಿದ್ದಾರೆ ಎಂದರು.

ಪ್ರತಿಯೊಬ್ಬರು ಬಡವರಿಗೆ ನೆರವಾಗಬೇಕು. ಭಾರೀ ಪ್ರಮಾಣದ ವಲಸಿಗ ಕಾರ್ಮಿಕರನ್ನು ರೈಲ್ವೇಸ್ ಅವರ ಮನೆಗೆ ಕಳುಹಿಸಿಕೊಡುತ್ತಿದೆ ಎಂದರು.

ಆರ್ಥಿಕತೆ ನಿಧಾನವಾಗಿ ಮುಕ್ತವಾಗುತ್ತಿದ್ದು, ಜನರು ಹೆಚ್ಚಿನ ಎಚ್ಚರಿಕೆವಹಿಸಬೇಕು. ಸುರಕ್ಷಿತ ಅಂತರ ಹಾಗೂ ಮಾಸ್ಕ್‌ಗಳನ್ನು ಧರಿಸುವುದು ಸೇರಿದಂತೆ ಎಲ್ಲ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ದೊಡ್ಡ ಪ್ರಮಾಣದ ಆರ್ಥಿಕತೆ ಮುಕ್ತವಾಗುತ್ತಿದ್ದು, ರೈಲ್ವೆ ಹಾಗೂ ವಾಯು ಸಂಚಾರ ಭಾಗಶಃ ಮರು ಆರಂಭವಾಗುತ್ತಿದೆ. ಹೀಗಾಗಿ ಎಲ್ಲರೂ ಇನ್ನಷ್ಟು ಎಚ್ಚರಿಕೆಯಿಂದಿರಬೇಕು ಎಂದು ದೇಶದ ಜನತೆಗೆ ಪ್ರಧಾನಿ ಕಿವಿ ಮಾತು ಹೇಳಿದರು.

ಬಿಕ್ಕಟ್ಟಿನ ಸಂದರ್ಭದಲ್ಲಿ ಬಡವರು ಎದುರಿಸುತ್ತಿರುವ ಸಮಸ್ಯೆಗಳು ಆತ್ಮಾವಲೋಕನಕ್ಕೆ ಕಾರಣವಾಗುವ ಜೊತೆಗೆ ಭವಿಷ್ಯಕ್ಕೆ ಪಾಠ ಕಲಿಸುತ್ತಿದೆ. ದೇಶದ ಇತರ ವಲಯಗಳ ಬೆಳವಣಿಗೆಗೆ ಹಿಂದಿರುವ ದೇಶದ ಪೂರ್ವ ಪ್ರದೇಶದ ಜನರ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಕೊರೋನ ವೈರಸ್ ವಿಶ್ವದ ಪ್ರತಿ ಮೂಲೆಮೂಲೆಗೂ ತಟ್ಟಿದೆ. ಭಾರತವೂ ಅದರಿಂದ ಹೊರತಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

 ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಭಾರತವು ವಿಶ್ವದ ಇತರ ದೇಶಕ್ಕಿಂತ ಉತ್ತಮವಾಗಿದೆ ಎಂದಿರುವ ಪ್ರಧಾನಿ ಮೋದಿ, ದೇಶದ ವಿವಿಧ ಭಾಗಗಳಲ್ಲಿ ಜನರು ತೋರಿಸಿರುವ ಹೊಸತನದ ಸ್ಫೂರ್ತಿ ಹಾಗೂ ಸೇವಾ ಪ್ರಜ್ಞೆಯನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News