ಉಮರ್ ಅಕ್ಮಲ್ ಮನವಿಯನ್ನು ಆಲಿಸಲಿರುವ ನಿವೃತ್ತ ನ್ಯಾಯಾಧೀಶರು

Update: 2020-06-01 06:43 GMT

ಕರಾಚಿ: ಭ್ರಷ್ಟ ವಿಧಾನಗಳನ್ನು ವರದಿ ಮಾಡಲು ವಿಫಲವಾದ ಕಾರಣಕ್ಕಾಗಿ ಕ್ರಿಕೆಟ್‌ನಿಂದ ಮೂರು ವರ್ಷಗಳ ನಿಷೇಧವನ್ನು ಪ್ರಶ್ನಿಸಿ ಕಳಂಕಿತ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಸಲ್ಲಿಸಿರುವ ಮೇಲ್ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಫಕೀರ್ ಮುಹಮ್ಮದ್ ಖೋಖರ್ ಅವರನ್ನು ಸ್ವತಂತ್ರ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ರವಿವಾರ ತಿಳಿಸಿದೆ.

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಮುಂಚಿತವಾಗಿ ಭ್ರಷ್ಟಾಚಾರದ ವಿಧಾನಗಳನ್ನು ವರದಿ ಮಾಡದಿದ್ದಕ್ಕಾಗಿ ಶಿಸ್ತು ಸಮಿತಿಯು ತಪ್ಪಿತಸ್ಥರೆಂದು ಕಂಡುಬಂದ ನಂತರ ಪಿಸಿಬಿ ಕಳೆದ ತಿಂಗಳು ಎಲ್ಲಾ ರೀತಿಯ ಕ್ರಿಕೆಟ್‌ಗಳಿಂದ ಅಕ್ಮಲ್ ಅವರನ್ನು ನಿಷೇಧಿಸಿತ್ತು.

  30ರ ಹರೆಯದ ಅಕ್ಮಲ್ ಅವರ ಮೇಲ್ಮನವಿಯ ವಿಚಾರಣೆಗೆ ಪಿಸಿಬಿ ಸ್ವತಂತ್ರ ನ್ಯಾಯಾಧೀಶರು ಈಗ ಮೇಲ್ಮನವಿ ವಿಚಾರಣೆಯ ದಿನಾಂಕವನ್ನು ನಿರ್ಧರಿಸುತ್ತಾರೆ ಎಂದು ಪಿಸಿಬಿ ತಿಳಿಸಿದೆ.

 ಪ್ರಧಾನ ಮಂತ್ರಿ ಸಂಸದೀಯ ವ್ಯವಹಾರಗಳ ಸಲಹೆಗಾರ ಬಾಬರ್ ಅವನ್ ಅವರನ್ನು ಅಕ್ಮಲ್ ತನ್ನ ಕಾನೂನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ಕ್ರೀಡಾ ವೆಬ್‌ಸೈಟ್ ‘ಜಿಯೋ’ ವರದಿ ಮಾಡಿದೆ.

  ಫೆಬ್ರವರಿಯಲ್ಲಿ ನಡೆಯಲಿರುವ 2020ರ ಪಿಎಸ್‌ಎಲ್‌ನ ಆರಂಭಿಕ ಪಂದ್ಯದಲ್ಲಿ ಅವರ ಪಿಎಸ್‌ಎಲ್ ತಂಡ ಕ್ವೆಟ್ಟಾ ಗ್ಲಾಡಿಯೇಟರ್ಸ್ ಇಸ್ಲಾಮಾಬಾದ್ ವಿರುದ್ಧ ಸೆಣಸುವ ಕೆಲವೇ ಗಂಟೆಗಳ ಮೊದಲು ಅಕ್ಮಲ್ ಅವರನ್ನು ಪಿಸಿಬಿ ಅಮಾನತುಗೊಳಿಸಿತ್ತು.

 ಅಕ್ಮಲ್ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ -ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಅವರ ಕಿರಿಯ ಸಹೋದರ. ಮತ್ತು ತಂಡದ ಹಾಲಿ ನಾಯಕ ಬಾಬರ್ ಆಝಮ್ ಅವರ ಸೋದರ ಸಂಬಂಧಿಯಾಗಿದ್ದಾರೆ.

   ಅಕ್ಮಲ್ ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಪರ ಆಡಿದ್ದರು. 16 ಟೆಸ್ಟ್, 121 ಏಕದಿನ ಮತ್ತು 84 ಟ್ವೆಂಟಿ -20ಗಳಲ್ಲಿ ಆಡಿದ್ದು, ಮೂರು ಸ್ವರೂಪಗಳಲ್ಲಿ ಕ್ರಮವಾಗಿ 1,003, 3,194 ಮತ್ತು 1,690 ರನ್ ಗಳಿಸಿದ್ದಾರೆ. ನ್ಯೂಝಿಲ್ಯಾಂಡ್‌ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಕ್ಮಲ್ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News