ದೇಶದ ಜನತೆಯನ್ನು ಕೊರೋನದಿಂದ ರಕ್ಷಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ: ಸಿಎಂ ಬಿಎಸ್‌ವೈ

Update: 2020-06-01 14:30 GMT

ಬೆಂಗಳೂರು, ಜೂ. 1: ಮಾರಕ ಕೊರೋನ ಸೋಂಕು ನಿಯಂತ್ರಣ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ನೆರವು ದೊರೆಯುವ ವಿಶ್ವಾಸವಿದೆ. ಇದು ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಹಕಾರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಎರಡನೆ ಅವಧಿಗೆ ಅಧಿಕಾರಕ್ಕೆ ಬಂದ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರದಿಂದ 17,249 ಕೋಟಿ ರೂ. ಬಂದಿದ್ದು, ಆ ಪೈಕಿ 10,079 ಕೋಟಿ ರೂ. ಗಳು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ, ಪ್ರವಾಹ ಪರಿಹಾರಕ್ಕೆ 1,869 ಕೋಟಿ ರೂ. ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 49.12 ಲಕ್ಷ ಮಂದಿ ಫಲಾನುಭವಿಗಳಾಗಿದ್ದಾರೆ ಎಂದರು.

ಕಲಬುರಗಿ ವಿಮಾನ ನಿಲ್ದಾಣಗಳ ಉದ್ಘಾಟನೆ, ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ, ಬೆಂಗಳೂರಿನಲ್ಲಿ 148 ಕಿ.ಮೀ ಉದ್ದದ ಉಪನಗರ ರೈಲ್ವೆ ಯೋಜನೆಗೆ 18,600 ಕೋಟಿ ರೂ. ನೆರವು, ಹೆದ್ದಾರಿ ಮತ್ತು ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕೋಲಾರ ರೈಲ್ವೆ ವರ್ಕ್ ಶಾಪ್‍ಗೆ ನೆರವು, 2022ರೊಳಗೆ ಕರ್ನಾಟಕ ರಾಜ್ಯದ ಎಲ್ಲ ರೈಲ್ವೆ ಮಾರ್ಗ ಡಬ್ಲಿಂಗ್ ಹಾಗೂ ವಿದ್ಯುದೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ರಕ್ಷಣೆ ನೀಡುವಲ್ಲಿ ಯಶಸ್ವಿ: ಕೊರೋನ ಮಹಾಮಾರಿಯಿಂದ ಪ್ರಪಂಚದ ಬಲಿಷ್ಟ ರಾಷ್ಟ್ರಗಳೇ ಆಘಾತಕ್ಕೆ ಒಳಗಾಗಿವೆ. ಆದರೆ, ಪ್ರಧಾನಿ ಮೋದಿ ಸಕಾಲದಲ್ಲಿ ಅತ್ಯಂತ ಮುನ್ನಚ್ಚರಿಕೆ ವಹಿಸಿ ಸೋಂಕು ನಿಯಂತ್ರಣ ಮಾಡುವಲ್ಲಿ ಹಾಗೂ ಜನರನ್ನು ಸೋಂಕಿನಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆ ಸೇರಿದಂತೆ ಪ್ರಪಂಚದ ಎಲ್ಲ ರಾಷ್ಟ್ರಗಳು ಕೊರೋನ ಸೋಂಕು ನಿಯಂತ್ರಣ ವಿಚಾರದಲ್ಲಿ ಭಾರತ ದೇಶ ಕೈಗೊಂಡ ಕ್ರಮಗಳ ಬಗ್ಗೆ ಪ್ರಶಂಸಿಸಿವೆ. ಪ್ರಪಂಚದಲ್ಲೇ ಎರಡನೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶ ಜೀವ ಮತ್ತು ಜೀವನವನ್ನು ಸಂರಕ್ಷಣೆ ಮಾಡಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು ಎಂದು ಹೇಳಿದರು.

ಕೊರೋನ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಪ್ರಧಾನಿ ಮೋದಿಯ 'ಆತ್ಮ ನಿರ್ಭರ್ ಭಾರತ್'/ ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಯೋಜನೆ ಜನರ ಕಷ್ಟಕ್ಕೆ ನೆರವಾಗಲಿದೆ ಎಂದ ಅವರು, ಇದರಿಂದ ದೇಶದ 5.94 ಕೋಟಿ ಜನರಿಗೆ ಉದ್ಯೋಗ ಸೃಷ್ಟಿ, ಸಣ್ಣ, ಮಧ್ಯಮ ಉದ್ಯೋಗಿಗಳಿಗೆ, ರಿಯಲ್ ಎಸ್ಟೇಟ್, ವಲಸೆ ಕಾರ್ಮಿಕರು ಸೇರಿದಂತೆ ಗ್ರಾಮೀಣ ಆರ್ಥಿಕತೆ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದರು.

ರಾಜ್ಯದ ನೆರವು: ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದ ಬಡವರ ಹಸಿವು ನೀಗಿಸಲು ಆಹಾರ ವಿತರಣೆಗಾಗಿ 8 ಲಕ್ಷ ಟನ್ ಆಹಾರ ಪದಾರ್ಥಗಳನ್ನು ನೀಡುವ ಮೂಲಕ 2,351 ಕೋಟಿ ರೂ. ನೆರವು ನೀಡಿದ್ದಾರೆ. ರಾಜ್ಯ ಸರಕಾರ ಸಂಕಷ್ಟದಲ್ಲಿರುವವರಿಗೆ 1,610 ಕೋಟಿ ರೂ. ಮತ್ತು 662 ಕೋಟಿ ರೂ. ಶ್ರಮಿಕ ಸಮುದಾಯ, ರೈತರು ಮತ್ತು ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ನೀಡಲಾಗಿದೆ ಎಂದು ಯಡಿಯೂರಪ್ಪ ವಿವರ ನೀಡಿದರು.

ಕಾರ್ಪೋರೇಟ್ ತೆರಿಗೆ ಇಳಿಕೆ: ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆ ಸೃಷ್ಟಿಸಲು ಕಾರ್ಪೋರೆಟ್ ತೆರಿಗೆಯಲ್ಲಿ ಭಾರೀ ತೆರಿಗೆ ತಗ್ಗಿಸಲಾಗಿದೆ. ದೇಶದ ಆರ್ಥಿಕತೆಯ ಭದ್ರತೆಗೆ ಆರ್ಥಿಕ ಪುನರುಜ್ಜೀವನಕ್ಕೆ ಅನೇಕ ಕಾರ್ಯಕ್ರಮ ನೀಡಿದ್ದಾರೆ. ದೇಶವನ್ನು ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಮುಕ್ತಗೊಳಿಸಿದ್ದಾರೆ ಎಂದು ಯಡಿಯೂರಪ್ಪ ಶ್ಲಾಘಿಸಿದರು.

ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ಸಮರ್ಪಿಸಿಕೊಂಡ ವ್ಯಕ್ತಿತ್ವದ ಪ್ರಧಾನಿ ಮೋದಿಯವರು, ಹಲವು ದಶಕಗಳಿಂದ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಆಡಳಿತದಲ್ಲಿ ತಂತ್ರಜ್ಞಾನದ ಆಳವಡಿಕೆ, ಪಾರದರ್ಶಕತೆ ತಂದು, ದೇಶ ಸಂರಕ್ಷಣೆಗೆ ಆದ್ಯತೆ ನೀಡಿದ್ದಾರೆ'

-ಯಡಿಯೂರಪ್ಪ, ಮುಖ್ಯಮಂತ್ರಿ

ರೈತರು, ಕಾರ್ಮಿಕರು, ಬೀದಿ ವ್ಯಾಪಾರಿಗಳಿಗೆ, ಸಣ್ಣ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರಿಗೆ ಪ್ರಧಾನಿ ಮೋದಿ ಪಿಂಚಣಿ ಯೋಜನೆ ಜಾರಿ ಮಾಡಿದ್ದು, ವಲಸಿಗ ಕಾರ್ಮಿಕರ ಅನುಕೂಲಕ್ಕಾಗಿ ಅಂತರಾಜ್ಯ ಪಡಿತರ ಚೀಟಿ ಪೋರ್ಟಿಬಿಲಿಟಿ ಜಾರಿ ಮಾಡುವ ಮೂಲಕ 'ಒಂದು ದೇಶ ಒಂದು ಪಡಿತರ ವ್ಯವಸ್ಥೆ' ಜಾರಿ ಮಾಡಿದ್ದಾರೆ'

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News