ರಾಜ್ಯದ ಎಸೆಸೆಲ್ಸಿ ಪರೀಕ್ಷಾರ್ಥಿಗಳಿಗೆ 'ಎಂಬೆಸ್ಸಿ'ಯಿಂದ ಉಚಿತ ಸ್ಯಾನಿಟೈಸರ್ ವಿತರಣೆ

Update: 2020-06-01 16:19 GMT

ಬೆಂಗಳೂರು, ಜೂ. 1: ಭಾರತದ ಮೊದಲ ಮತ್ತು ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗಿರುವ ಏಕೈಕ ಆರ್‍ಇಐಟಿ ಆಗಿರುವ ಎಂಬೆಸ್ಸಿ ಆಫೀಸ್ ಪಾರ್ಕ್ಸ್ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ ತನ್ನ ಅಂಗ ಸಂಸ್ಥೆಗಳು ಸಹಭಾಗಿತ್ವದಲ್ಲಿ ರಾಜ್ಯದ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ 9.20 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷಾ ಸಿಬ್ಬಂದಿಗೆ ಉಚಿತವಾಗಿ ಸ್ಯಾನಿಟೈಸರ್ ವಿತರಣೆ ಮಾಡಲಿದೆ.

ಸೋಮವಾರ ನಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಂಬೆಸ್ಸಿ ಆರ್ ಇಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕ್ ಹಾಲೆಂಡ್, ರಾಜ್ಯಮಟ್ಟದ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಎದುರಾಗಿರುವ ಕೊರೋನ ಸೋಂಕಿನಂತಹ ಸಾಂಕ್ರಾಮಿಕ ರೋಗದ ಅಪಾಯವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಹೆಚ್ಚಿಸುವುದಕ್ಕೆ ನಮಗೆ ಸಾಧ್ಯವಾಗಿರುವುದರ ಬಗ್ಗೆ ಹರ್ಷಪಡುತ್ತೇವೆ. ನಮ್ಮ ಕಾರ್ಪೋರೇಟ್ ಪಾಲುದಾರ ಸಂಸ್ಥೆಗಳಾದ-ಸರ್ನರ್ ಕಾಗ್ನಿಸೆಂಟ್, ಎಲ್ ಅಂಡ್ ಟಿ ಮತ್ತು ಎಎಕ್ಸ್ ಎ ಎಕ್ಸ್ ಎಲ್‍ಗಳೊಂದಿಗೆ ಮತ್ತೊಮ್ಮೆ ಕೈಜೋಡಿಸಿ ಕರ್ನಾಟಕದ ವಿದ್ಯಾರ್ಥಿಗಳ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡಲು ನಾವು ಹರ್ಷಿಸುತ್ತೇವೆ. ಅಲ್ಲದೆ, ಇವರೆಲ್ಲರೂ ಭಾಗವಹಿಸುವುದನ್ನು ನೋಡುವುದು ಹೃದಯಸ್ಪರ್ಶಿ ಅನುಭವವಾಗಿದೆ ಎಂದರು.

ಕಾರ್ಪೋರೇಟ್ ಸಂಪರ್ಕ ಕಾರ್ಯಕ್ರಮದ ಮೂಲಕ ನಾಲ್ಕು ವರ್ಷಗಳಲ್ಲಿ ಎಂಬೆಸ್ಸಿ ಆಫೀಸ್ ಪಾರ್ಕ್ಸ್ 20 ಕಾರ್ಪೋರೇಟ್ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು 34 ಸಮುದಾಯ ಯೋಜನೆಗಳಿಗಾಗಿ ಕೈಗೊಂಡಿದೆ. ಸಹಭಾಗಿತ್ವ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯನ್ನು ಸಂಸ್ಥೆ ಹೊಂದಿದೆ ಎಂದರು.

ಸರ್ನರ್ ನ ಸಿಇಓ ಡಾಮ್ನಿಕ್ ಪ್ರಶಾಂತ್ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಕೈಗೊಳ್ಳಲಾದ ಕ್ರಮಗಳನ್ನು ಬೆಂಬಲಿಸುವಲ್ಲಿ ನಮ್ಮ ಭಾಗದ ಪಾತ್ರ ವಹಿಸುವಲ್ಲಿ ಸರ್ನರ್ ಬಹಳ ಆಸಕ್ತಿ ಹೊಂದಿದೆ. ಈ ಸಂದರ್ಭದಲ್ಲಿ ಸಹಭಾಗಿತ್ವದೊಂದಿಗೆ ಸಮಾಜಕ್ಕೆ ಮರಳಿ ಸೇವೆ ಸಲ್ಲಿಸುವಲ್ಲಿ ತಮ್ಮೊಂದಿಗೆ ಸೇರಿಕೊಳ್ಳುವಂತೆ ಎಂಬೆಸ್ಸಿ ಆರ್ ಇಐಟಿ ನಮ್ಮನ್ನು ಸಂಪರ್ಕಿಸಿತ್ತು. ನಾವು ನಮ್ಮ ನೆರವನ್ನು ಈಗಾಗಲೇ ನೀಡಿದ್ದು, ಇದೇ ರೀತಿ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಇತರೆ ಕಾರ್ಪೋರೇಟ್ ಸಂಸ್ಥೆಗಳನ್ನು ಆಹ್ವಾನಿಸುತ್ತೇವೆ ಎಂದರು.

ಈ ವೇಳೆ ಕಾಗ್ನಿಸೆಂಟ್‍ನ ಸಮುದಾಯ ಸೇವಾ ವಿಭಾಗದ ಮುಖ್ಯಸ್ಥ ದೀಪಕ್ ಪ್ರಭು ಮಟ್ಟಿ, ಎಲ್&ಟಿ ಟೆಕ್ನಾಲಜಿ ಸರ್ವೀಸಸ್ ವಿಭಾಗದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ವಿಭಾಗದ ಮುಖ್ಯಸ್ಥ ಕೆ.ಎನ್. ಪ್ರಭಾಕರನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News