ಭಾರತದ ಮಾಜಿ ಆರ್ಚರಿ ಕೋಚ್ ಜಯಂತಿಲಾಲ್ ರಸ್ತೆ ಅಪಘಾತಕ್ಕೆ ಬಲಿ

Update: 2020-06-02 04:25 GMT

ಜೈಪುರ: ಮಾಜಿ ಅಂತರ್‌ರಾಷ್ಟ್ರೀಯ ಆರ್ಚರ್ ಕೋಚ್ ಜಯಂತಿಲಾಲ್ ನನೋಮಾ ರವಿವಾರ ಬೆಳಗ್ಗೆ ಉದಯಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ. ಬನ್ಸಾವರದಿಂದ ತನ್ನ ತವರು ಜಿಲ್ಲೆ ಡುಂಗಾರ್‌ಪುರಕ್ಕೆ ಸ್ನೇಹಿತನ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

 ‘‘ಗಂಭೀರ ಗಾಯಗೊಂಡಿದ್ದ ಜಯಂತಿಲಾಲ್‌ರನ್ನು ಮೊದಲಿಗೆ ಸಾಗ್ವಾರದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಆಮ್ಲಜನಕದ ವ್ಯವಸ್ಥೆ ಇಲ್ಲದ ಕಾರಣ ಅದೇ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರು ಉದಯಪುರದ ಗೀತಾಂಜಲಿ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು’’ಎಂದು ವರ್ದಾ ಥಾನದ ಎಸ್‌ಎಚ್‌ಒ ಸಾಗರ್ ಚಂದ್ ಹೇಳಿದ್ದಾರೆ. ಜಯಂತಿಲಾಲ್ ಸ್ನೇಹಿತ, ದೈಹಿಕ ಶಿಕ್ಷಣ ಶಿಕ್ಷಕನ ಸ್ಥಿತಿ ಸ್ಥಿರವಾಗಿದೆ. ಮೃತ 34ರ ಹರೆಯದ ಜಯಂತಿಲಾಲ್ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

 ರಾಜಸ್ಥಾನದ ಕಾಂಪೌಂಡರ್ ಆರ್ಚರ್ ಆಗಿದ್ದ ಜಯಂತಿಲಾಲ್ ಅಂತರ್‌ರಾಷ್ಟೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಜಯಿಸಿ ರಾಜ್ಯಕ್ಕೆ ಹೆಮ್ಮೆ ತಂದಿದ್ದರು. 2010ರಲ್ಲಿ ಏಶ್ಯಕಪ್ ಜಿಪಿಯ ವೈಯಕ್ತಿಕ ಹಾಗೂ ಟೀಮ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಜಯಿಸಿದ್ದರು. 2003 ಹಾಗೂ 2010ರ ನಡುವೆ ಏಶ್ಯಕಪ್ ಜಿಪಿಯಲ್ಲಿ ಹಲವು ಪದಕಗಳನ್ನು ಗೆದ್ದ ತಂಡದ ಸದಸ್ಯರಾಗಿದ್ದರು. 2013 ಹಾಗೂ 2015ರಲ್ಲಿ ಭಾರತದ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಡುಂಗಾರ್ಪುರದಲ್ಲಿ ಜಿಲ್ಲಾ ಕ್ರೀಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News