ಶೂಟೌಟ್ ಮೂಲಕ ಹಳೆ ಆರೋಪಿಯೋರ್ವನ ಬಂಧನ

Update: 2020-06-03 04:46 GMT

ಬೆಂಗಳೂರು, ಜೂ.3: ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಯೋರ್ವನನ್ನು ಶೂಟೌಟ್ ಮೂಲಕ ವಶಕ್ಕೆ ಪಡೆದ ಘಟನೆ ಅಮೃತ ಹಳ್ಳಿ ಠಾಣಾ ಪೊಲೀಸರು ಬುಧವಾರ ಮುಂಜಾನೆ ಬಂಧಿಸಿದ್ದಾರೆ.

ಮುನಿಕೃಷ್ಣ ಕಪ್ಪೆ (27) ಬಂಧಿತ ಆರೋಪಿ. ಅಮೃತಹಳ್ಳಿ ಪೊಲೀಸ್ ಠಾಣಾ ರೌಡಿ ಅಸಾಮಿ ಆಗಿರುವ ಈತನ ವಿರುದ್ಧ ಅಮೃತಹಳ್ಳಿ, ಕೋಡಿಗೆಹಳ್ಳಿ, ಜ್ಞಾನಭಾರತಿ, ಚಿಕ್ಕಜಾಲಾ ಠಾಣೆಗಳಲ್ಲಿ ಕೊಲೆ ಯತ್ನ, ಹಲ್ಲೆ ಪ್ರಕರಣಗಳು ಸೇರಿದಂತೆ 8ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ತಲೆಮರೆಸಿಕೊಂಡಿದ್ದ ಮುನಿಕೃಷ್ಣ ಬುಧವಾರ ಬೆಳಗಿನ ಜಾವ ಬಾಗಲೂರು ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಕಲ್ಲು ಕ್ವಾರೆ ಸಮೀಪ ಇರುವುದಾಗಿ ಬಂದ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಮಿಟ್ಟಗಾನಹಳ್ಳಿ ಮುಖ್ಯ ರಸ್ತೆಯಲ್ಲಿ ಇರುವ ಬಲಭಾಗದ ಪಾಳು ಬಿದ್ದಿರುವ ಮನೆಯ ಹತ್ತಿರ ಇಬ್ಬರು ಆರೋಪಿಗಳಿದ್ದು, ಓರ್ವ ಪರಾರಿಯಾಗಿದ್ದಾನೆ. ಈ ವೇಳೆ ಮುನಿಕೃಷ್ಣನನ್ನು ಹಿಡಿಯಲು ಮುಂದಾದ ಅಪರಾದ ವಿಭಾಗದ ಹೆಡ್ ಕಾನ್‌ಸ್ಟೇಬಲ್ ನಂದೀಶ್ ಎಂಬವವರ ಮೇಲೆ ಡ್ರಾಗರ್ ನಿಂದ ಹಲ್ಲೆ ಮಾಡಿದನೆನ್ನಲಾಗಿದೆ. ಆತನಿಗೆ ಶರಣಾಗುವಂತೆ ಸೂಚಿಸಿದರೂ ಆತ ಹಲ್ಲೆ ಮುಂದುವರಿಸಿದನೆನ್ನಲಾಗಿದೆ. ಈ ಸಂದರ್ಭ ಜೊತೆಯಲ್ಲಿದ್ದ ಇನ್‌ಸ್ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದಾಗ ಅವರ ಮೇಲೂ ಹಲ್ಲೆಗೆ ಮುಂದಾದಾನೆನ್ನಲಾಗಿದೆ. ಆಗ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲು ಮೊಣಕಾಲಿನ ಕೆಳಗೆ ಗುಂಡು ಹಾರಿಸಿ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮತ್ತು ಹಲ್ಲೆಗೊಳಗಾದ ಎಚ್.ಸಿ. ನಂದೀಶ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News