ರಾಜ್ಯಸಭಾ ಚುನಾವಣೆ: ದೇವೇಗೌಡರ ಸ್ಪರ್ಧೆಗೆ ಕಾಂಗ್ರೆಸ್ ಅವಕಾಶ ಕಲ್ಪಿಸಬೇಕು- ಕೆ.ಎಚ್.ಮುನಿಯಪ್ಪ

Update: 2020-06-03 11:44 GMT

ಬೆಂಗಳೂರು, ಜೂ. 3: ರಾಜ್ಯಸಭಾ ಚುನಾವಣೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಸ್ಪರ್ಧೆಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕಲ್ಪಿಸಬೇಕು. ಜಾತ್ಯತೀತ ಪಕ್ಷಗಳು ಒಬ್ಬರಿಗೆ ಮತ್ತೊಬ್ಬರ ಸಹಕಾರ ನೀಡುವುದು ಅನಿವಾರ್ಯ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಅವರು ದೇವೇಗೌಡರಿಗೆ ಬೆಂಬಲ ಸೂಚಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯದ ಪ್ರಶ್ನಾತೀತ ನಾಯಕ. ಅವರಿಗೆ ಟಿಕೆಟ್ ನೀಡುವುದನ್ನು ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಖರ್ಗೆ, ಹರಿಪ್ರಸಾದ್ ಅಥವಾ ರಾಜೀವ್ ಗೌಡ ಯಾರೇ ಆದರೂ ವರಿಷ್ಠರಿಗೆ ನಾವು ಸಲಹೆ ನೀಡುವ ಅಗತ್ಯವಿಲ್ಲ. ಈ ಬಗ್ಗೆ ಅವರೇ ನಿರ್ಧಾರ ಮಾಡಲಿದ್ದಾರೆ ಎಂದರು.

ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿದ್ದೆವು. ಈಗಲೂ ಅಂತಹ ಅವಕಾಶವಿದೆ. ದೇವೇಗೌಡರು ಹಿಂಬಾಗಿಲ ಮೂಲಕ ಹೋದವರಲ್ಲ. ಅವರೊಬ್ಬ ಅಪ್ಪಟ ರೈತ ಹೋರಾಟಗಾರ. ಪ್ರಧಾನಿಯಾಗಿದ್ದು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ನಮ್ಮ ಹೈಕಮಾಂಡ್ ಅವಕಾಶ ನೀಡುವುದರಲ್ಲಿ ತಪ್ಪಿಲ್ಲ ಎಂದು ಮುನಿಯಪ್ಪ ಹೇಳಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ಒಗ್ಗಟ್ಟಿನಿಂದ ಇದ್ದಾರೆ. ಇಬ್ಬರು ಸೇರಿ ಈ ಬಗ್ಗೆ ತೀರ್ಮಾನ ಮಾಡಲಿದ್ದು, ಬಿಜೆಪಿ ಪರವಾಗಿ ಕೆಲಸ ಮಾಡುವವರಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರು ರಾಜ್ಯಸಭೆಯಲ್ಲಿ ಇರಬೇಕು ಎಂದು ಮುನಿಯಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News