×
Ad

ಕಾಲಿಗೆ ಗುಂಡಿಕ್ಕಿ ರೌಡಿ ಶೀಟರ್ ಬಂಧನ

Update: 2020-06-03 17:16 IST

ಬೆಂಗಳೂರು, ಜೂ.3: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪದಡಿ ರೌಡಿಯೊಬ್ಬನ ಕಾಲಿಗೆ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಗುಂಡೇಟು ಬಲಗಾಲಿಗೆ ತಗುಲಿ ಗಾಯಗೊಂಡಿರುವ ಅಮೃತಹಳ್ಳಿ ವೃತ್ತದ ರೌಡಿ ಮುನಿಕೃಷ್ಣ(27) ಇಲ್ಲಿನ ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಮೇ 4 ರಂದು ಹೊಯ್ಸಳ ಲೇಔಟ್‍ನಲ್ಲಿ ಮದ್ಯದ ಬಾಟಲಿ ಕೊಡದ ಕಾರಣಕ್ಕಾಗಿ ಆಕ್ರೋಶಗೊಂಡು ಯಶವಂತ್ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಿ ಮುನಿಕೃಷ್ಣ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಧಾವಿಸಿದ ಅಮೃತಹಳ್ಳಿ ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ, ತಪ್ಪಿತಸ್ಥ ಆರೋಪಿಗಾಗಿ ಕಾರ್ಯಾಚರಣೆ ಆರಂಭಿಸಿದ್ದರು.

ಇಲ್ಲಿನ ಬಾಗಲೂರಿನ ಮಿಟ್ಟಗಾನಹಳ್ಳಿ ಕಲ್ಲು ಕ್ವಾರೆಯ ಪಾಳು ಬಿದ್ದಿರುವ ಮನೆಯ ಬಳಿ ಬುಧವಾರ ಮುಂಜಾನೆ 5:30ರ ವೇಳೆ ಮುನಿಕೃಷ್ಣ ಇರುವ ಖಚಿತ ಮಾಹಿತಿ ಲಭ್ಯವಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮುನಿಕೃಷ್ಣನನ್ನು ಬಂಧಿಸಲು ಮುಂದಾದ ವೇಳೆ ಪೊಲೀಸ್ ಮುಖ್ಯ ಪೇದೆ ದಿನೇಶ್ ಮೇಲೆ ಮುನಿಕೃಷ್ಣ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.

ಕೂಡಲೇ ಆರೋಪಿಗೆ ಶರಣಾಗುವಂತೆ ಪೊಲೀಸರು ಸೂಚಿಸಿದರೂ ಆತ ಮತ್ತೆ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆತ್ಮರಕ್ಷಣೆಗಾಗಿ ಅಮೃತಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ಅರುಣ್‍ ಕುಮಾರ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News