ವೀಡಿಯೊ ಕಾನ್ಫರೆನ್ಸ್ ಶೃಂಗಸಭೆಯ ಮೂಲಕ ಭಾರತ- ಆಸೀಸ್ ಮಧ್ಯೆ ಐತಿಹಾಸಿಕ ಒಪ್ಪಂದಕ್ಕೆ ಸಹಿ

Update: 2020-06-04 18:19 GMT

ಹೊಸದಿಲ್ಲಿ, ಜೂ.4: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮಧ್ಯೆ ಗುರುವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಶೃಂಗಸಭೆಯ ಬಳಿಕ ವ್ಯೆಹಾತ್ಮಕ ಸಹಕಾರಕ್ಕಾಗಿ ಪರಸ್ಪರರ ಸೇನಾನೆಲೆಗಳಿಗೆ ಪ್ರವೇಶಾವಕಾಶ ಸಹಿತ 6 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಉಭಯ ದೇಶಗಳ ನಡುವಿನ ಪರಸ್ಪರ ವ್ಯೆಹಾತ್ಮಕ ಸಹಾಯ-ಸಹಕಾರ ಒಪ್ಪಂದವು ಎರಡೂ ದೇಶಗಳು ಪರಸ್ಪರರ ಸೇನಾನೆಲೆಗಳನ್ನು ದುರಸ್ತಿ , ಪೂರೈಕೆ, ಮರುಪೂರಣ ಪ್ರಕ್ರಿಯೆಗೆ ಬಳಸಿಕೊಳ್ಳಲು ನೆರವಾಗುವುದರ ಜೊತೆಗೆ ಸಮಗ್ರ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ. ಭಾರತವು ಈಗಾಗಲೇ ಇದೇ ರೀತಿಯ ಒಪ್ಪಂದವನ್ನು ಅಮೆರಿಕ, ಫ್ರಾನ್ಸ್ ಮತ್ತು ಸಿಂಗಾಪುರದೊಂದಿಗೆ ಮಾಡಿಕೊಂಡಿದೆ.

ಈ ಸಂದರ್ಭ ಮಾತನಾಡಿದ ನರೇಂದ್ರ ಮೋದಿ, ವರ್ಚುವಲ್ ಶೃಂಗಸಭೆ ಭಾರತ-ಆಸ್ಟ್ರೇಲಿಯಾ ನಡುವಿನ ಸ್ನೇಹ ಸಂಬಂಧದ ಹೊಸ ಮಾದರಿಯಾಗಿದೆ ಎಂದು ಬಣ್ಣಿಸಿದರು. ಎರಡು ವ್ಯೂಹಾತ್ಮಕ ಸಹಭಾಗಿಗಳ ನಡುವಿನ ಸ್ನೇಹಸಂಬಂಧವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಅಭೂತಪೂರ್ವ ಚರ್ಚೆ ನಡೆಸಲಾಗಿದೆ ಎಂದ ಮೋದಿ, ಈಗ ದೇಶಕ್ಕೆ ಎದುರಾಗಿರುವ ಸಮಸ್ಯೆಯನ್ನು ಒಂದು ಅವಕಾಶ ಎಂದು ಪರಿಗಣಿಸಲು ತಮ್ಮ ಸರಕಾರ ನಿರ್ಧರಿಸಿದೆ ಎಂದರು. ಅಲ್ಲದೆ ಈ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ಸುರಕ್ಷತೆಗೆ ಆಸ್ಪ್ರೇಲಿಯಾದ ಪ್ರಧಾನಿ ಅತ್ಯುತ್ತಮ ಕ್ರಮಗಳನ್ನು ಕೈಗೊಂಡಿದ್ದಾರೆ. ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಇದು ಸಕಾಲ ಮತ್ತು ಸದವಕಾಶವಾಗಿದೆ ಎಂದರು.

ಬಳಿಕ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್, ಜಿ-20 ನಾಯಕತ್ವ ಸಹಿತ ಕೊರೋನ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮೋದಿ ತೋರಿರುವ ರಚನಾತ್ಮಕ ಮತ್ತು ಸಕಾರಾತ್ಮಕ ಕ್ರಮಗಳನ್ನು ಶ್ಲಾಘಿಸಿದರು.

ಸೈಬರ್‌ಕ್ಷೇತ್ರ ಹಾಗೂ ಸೈಬರ್ ಸಂಬಂಧಿಸಿದ ಸೂಕ್ಷ್ಮ ತಂತ್ರಜ್ಞಾನ , ಗಣಿಗಾರಿಕೆ ಮತ್ತು ಖನಿಜಗಳು, ಮಿಲಿಟರಿ ತಂತ್ರಜ್ಞಾನ, ವೃತ್ತಿಪರ ಶಿಕ್ಷಣ ಮತ್ತು ಜಲಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲೂ ಪರಸ್ಪರ ಸಹಕಾರಕ್ಕೆ ಉಭಯ ದೇಶಗಳ ಮಧ್ಯೆ ಒಪ್ಪಂದವಾಗಿದೆ.

ಹೆಚ್ಚುತ್ತಿರುವ ಭಯೋತ್ಪಾದಕತೆಯ ಬೆದರಿಕೆಯನ್ನು ಹತ್ತಿಕ್ಕುವುದು, ಇಂಡೊ-ಪೆಸಿಫಿಕ್ ವಲಯದಲ್ಲಿ ಸಮುದ್ರ ಸಂಬಂಧದ ಭದ್ರತೆಗೆ ಎದುರಾಗಿರುವ ಸವಾಲು, ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ದಲ್ಲಿ ಸುಧಾರಣೆ ಮತ್ತಿತರ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಭಾರತ - ಆಸ್ಟ್ರೇಲಿಯಾ ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದ(ಡಿಟಿಎಎ)ವನ್ನು ಬಳಸಿಕೊಂಡು ಭಾರತದ ಸಂಸ್ಥೆಗಳ ಸಮುದ್ರಗಾಮಿ(ಕಡಲಾಚೆಯ) ಆದಾಯದ ಮೇಲೆ ತೆರಿಗೆ ವಿಧಿಸುವ ಬಗ್ಗೆ ಹಾಗೂ ಈ ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸುವ ಕುರಿತು ಚರ್ಚಿಸಲಾಗಿದೆ ಎಂದು ಬಳಿಕ ಬಿಡುಗಡೆಗೊಳಿಸಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದನೆಯು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬಹುದೊಡ್ಡ ಬೆದರಿಕೆಯಾಗಿದ್ದು, ಯಾವುದೇ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಸಮರ್ಥಿಸಲಾಗದು ಎಂದು ಉಭಯ ರಾಷ್ಟ್ರಗಳು ಒಪ್ಪಿಕೊಂಡಿದೆ. ಅಲ್ಲದೆ ಹಿಂಸಾತ್ಮಕ ಉಗ್ರವಾದವನ್ನು ಎದುರಿಸುವುದು, ಮೂಲಸಿದ್ಧಾಂತ ವಾದವನ್ನು ತಡೆಯುವುದು, ಉಗ್ರರಿಗೆ ದೊರಕುತ್ತಿರುವ ಆರ್ಥಿಕ ನೆರವನ್ನು ಭೇದಿಸುವುದು ಹಾಗೂ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರಗಿಸುವುದು ಸೇರಿದಂತೆ ಭಯೋತ್ಪಾದನೆಯ ವಿರುದ್ಧದ ಹೋರಾಟನ ನಿಟ್ಟಿನಲ್ಲಿ ವ್ಯಾಪಕ ಪ್ರಸ್ತಾವನೆಗೆ ಉಭಯ ದೇಶಗಳು ಬೆಂಬಲ ಸೂಚಿಸಿವೆ ಎಂದು ಜಂಟಿ ಹೇಳಿಕೆ ತಿಳಿಸಿದೆ. ಅಲ್ಲದೆ ಅಂತರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಸಮ್ಮೇಳನ(ಸಿಸಿಐಟಿ)ಯ ನಿರ್ಣಯಗಳ ಶೀಘ್ರ ಜಾರಿಗೆ ಉಭಯ ದೇಶಗಳು ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News