ಏಕಕಾಲಕ್ಕೆ 25 ಶಾಲೆಗಳಲ್ಲಿ ‘ಪಾಠ ಮಾಡಿ’ ಕೋಟಿ ಸಂಬಳ ಪಡೆದ ಮಹಾ ಶಿಕ್ಷಕಿ!

Update: 2020-06-05 06:57 GMT
ಸಾಂದರ್ಭಿಕ ಚಿತ್ರ

ಲಕ್ನೋ, ಜೂ.5: ದುರ್ಬಲ ವರ್ಗದ ಬಾಲಕಿಯರಿಗಾಗಿ ಉತ್ತರ ಪ್ರದೇಶ ಸರ್ಕಾರ ಆರಂಭಿಸಿದ ಕಸ್ತೂರ್ಬಾಗಾಂಧಿ ಬಾಲಿಕಾ ವಿದ್ಯಾಲಯದ ಪೂರ್ಣಾವಧಿ ವಿಜ್ಞಾನ ಶಿಕ್ಷಕಿ ಏಕಕಾಲಕ್ಕೆ 25 ಶಾಲೆಗಳಲ್ಲಿ 'ಕೆಲಸ' ಮಾಡುವ ಮೂಲಕ ಕೇವಲ ಹದಿಮೂರು ತಿಂಗಳಲ್ಲಿ ಒಂದು ಕೋಟಿ ರೂಪಾಯಿ ವೇತನ ಪಡೆದಿರುವ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.

ರಾಜ್ಯದಲ್ಲಿ ಶಿಕ್ಷಕರ ಡಾಟಾಬೇಸ್ ಸೃಷ್ಟಿಸುವ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ. 2020ರ ಫೆಬ್ರವರಿವರೆಗೆ 13 ತಿಂಗಳಿನಿಂದ ಅನಾಮಿಕಾ ಶುಕ್ಲಾ ಎಂಬ ಹೆಸರಿನ ಶಿಕ್ಷಕಿ 25 ಕಡೆಗಳಲ್ಲಿ ಏಕಕಾಲಕ್ಕೆ ಕರ್ತವ್ಯನಿರ್ವಹಿಸಿದ ಅಂಶ ಬಹಿರಂಗವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಹಾಜರಾತಿಯ ರಿಯಲ್ ಟೈಮ್ ಮಾನಿಟರಿಂಗ್ ಮಾಡಿದಾಗ ಈ ವಂಚನೆ ಪ್ರಕರಣ ಪತ್ತೆಯಾಗಿದೆ.

ಮೈನ್‌ಪುರಿ ಮೂಲದ ಈಕೆ ದಾಖಲೆಗಳ ಪ್ರಕಾರ ಎಲ್ಲ ಶಾಲೆಗಳನ್ನೂ ಕರ್ತವ್ಯ ನಿರ್ವಹಿಸಿದ್ದಳು. ಹಲವು ವರ್ಷಗಳಿಂದ ಈ ಶಾಲೆಗಳ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಈಕೆಯ ಹೆಸರಿದೆ. ಸಂಪರ್ಕಕ್ಕೆ ಸಿಗದ ಈ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಲು ತನಿಖೆ ನಡೆಯುತ್ತಿದೆ ಎಂದು ಶಾಲಾ ಶಿಕ್ಷಣದ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ಹೇಳಿದ್ದಾರೆ.

ಪ್ರೇರಣಾ ಪೋರ್ಟೆಲ್‌ನಲ್ಲಿ ಆನ್‌ಲೈನ್ ಸಹಿ ಮಾಡಬೇಕಿದ್ದರೂ, ಈಕೆ ಎಲ್ಲ ಶಾಲೆಗಳಲ್ಲಿ ಹಾಜರಾತಿಯನ್ನು ದಾಖಲಿಸಲು ಹೇಗೆ ಸಾಧ್ಯವಾಗಿದೆ ಎನ್ನುವುದನ್ನು ತನಿಖೆ ಮಾಡಬೇಕಾಗಿದೆ ಎಂದು ವಿವರಿಸಿದ್ದಾರೆ. ಮಾರ್ಚ್‌ನಲ್ಲಿ ಈ ಬಗ್ಗೆ ಮಹಾನಿರ್ದೇಶಕರಿಗೆ ದೂರು ಬಂದಿತ್ತು.

ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಲಾಕ್‌ಡೌನ್ ಕಾರಣದಿಂದ ಆಕೆಯ ದಾಖಲೆ ಪತ್ತೆಯಾಗುತ್ತಿಲ್ಲ. ಮೂಲವಾಗಿ ಆಕೆಯನ್ನು ಎಲ್ಲಿ ನಿಯೋಜಿಸಲಾಗಿತ್ತು ಎನ್ನುವ ಸುಳಿವು ಸಿಕ್ಕಿಲ್ಲ. ಇದು ನಿಜವಾಗಿದ್ದರೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಅಂಬೇಡ್ಕರ್ ‌ನಗರ, ಭಾಗ್ಪತ್, ಅಲೀಗಢ, ಸಹರಣಪುರ ಮತ್ತು ಪ್ರಯಾಗ್‌ರಾಜ್ ಕೆಜಿಬಿವಿಗಳಲ್ಲಿ ಶುಕ್ಲಾ ಅವರ ಉದ್ಯೋಗ ದೃಢಪಟ್ಟಿದೆ. ಕೆಜಿಬಿವಿ ಶಿಕ್ಷಕರನ್ನು ಗುತ್ತಿಗೆ ಮೂಲಕ ನೇಮಕ ಮಾಡಿಕೊಂಡು ಮಾಸಿಕ 30 ಸಾವಿರ ರೂ. ನೀಡಲಾಗುತ್ತದೆ. ಪ್ರತಿ ತಾಲೂಕುಗಳಲ್ಲಿ ಇಂಥ ಶಾಲೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News