ರಾಜ್ಯಸಭಾ ಸದಸ್ಯ ಡಾ.ನಸೀರ್ ಹುಸೈನ್ ರೊಂದಿಗೆ ಅನಿವಾಸಿ ಕನ್ನಡಿಗರ ವೀಡಿಯೊ ಕಾನ್ಫರೆನ್ಸ್

Update: 2020-06-05 05:20 GMT

ಸೌದಿ ಅರೇಬಿಯ, ಜೂ.5: ಅನಿವಾಸಿ ಕನ್ನಡಿಗರಿಗೊಂದು ಪರಿಹಾರವಾಗಿ, ಅವರ ತೊಂದರೆಗಳನ್ನು ಸರಕಾರದ ಗಮನಕ್ಕೆ ತರಲು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಅಂತಾರಾಷ್ಟ್ರೀಯ ಸಮಿತಿಯು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಸೀರ್ ಹುಸೈನ್ ರೊಂದಿಗೆ ಮೇ ಇತ್ತೀಚೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಿತು.

ಇದಕ್ಕೂ ಮೊದಲು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ವತಿಯಿಂದ ಡಾ. ನಸೀರ್ ಹುಸೈನ್ ರೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಲಾಗಿತ್ತು. ಈ ಸಂದರ್ಭ ಸೌದಿ ಅರೇಬಿಯಾ ನೇತಾರರು ಪ್ರಸ್ತಾಪಿಸಿದ್ದ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಾಣಲು ತಿಳಿಸಿದ್ದಾಗಿ ಡಾ. ನಸೀರ್ ಹುಸೈನ್ ಹೇಳಿದ್ದಾರೆ.

ಈ ಕಾನ್ಫರೆನ್ಸ್ ನಲ್ಲಿ ವಿಶ್ವದ ಹಲವು ದೇಶಗಳಲ್ಲಿರುವ ಕೆಸಿಎಫ್ ಪ್ರತಿನಿಧಿಗಳು ಭಾಗವಹಿಸಿ ಅವರವರ ಅಲ್ಲಿ ಅವರು ಎದುರಿಸುತ್ತಿರುವ ಸಮಸ್ಯಗಳನ್ನು ಡಾ. ನಸೀರ್ ಹುಸೈನ್ ರಿಗೆ ಮನವರಿಕೆ ಮಾಡಿಕೊಟ್ಟರು. ಪ್ರಮುಖವಾಗಿ ಗಲ್ಫ್ ನಲ್ಲಿರುವ ಕನ್ನಡಿಗರಿಗೆ ಕರ್ನಾಟಕಕ್ಕೆ ಹಿಂದಿರುಗಲು ವಿಮಾನಯಾನ ಆರಂಭಿಸುವುದು, ಉಚಿತವಾಗಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವುದು, ಹಲವರ ಪಾಸ್ಪೋರ್ಟ್ ಕಾಲಾವಧಿ ಮುಗಿದಿರುವುದು ಹಾಗೂ ಇನ್ನು ಕೆಲವರು ಅತ್ಯಾವಶ್ಯಕ ಕಾರ್ಯಕ್ಕಾಗಿ ಊರಿಗೆ ತೆರಲಿದ್ದು ಅಲ್ಲಿಂದ ಹಿಂದಿರುಗಿ ಅವರು ಕೆಲಸ ಮಾಡುವ ದೇಶಕ್ಕೆ ಬರಲು ಆಗದವರು, ಇನ್ನು ಲಂಡನ್ ನಲ್ಲಿರುವ ಕೆಲವು ವಿದ್ಯಾರ್ಥಿಗಳು ಅವರಿರುವ ವಸತಿಯ ಬಾಡಿಗೆ ನೀಡಲಾಗದೆ ಸಂಕಷ್ಟ ಎದುರಿಸುತ್ತಿರುವುದು…  ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಡಾ.ನಸೀರ್ ಹುಸೈನ್ ರ ಗಮನ ಸೆಳೆದರು.

ಸಮಸ್ಯೆಗಳನ್ನೆಲ್ಲಾ ಆಲಿಸಿದ ಡಾ.ನಸೀರ್ ಹುಸೈನ್,  ವಿಮಾನಯಾನ ಇಲ್ಲದ ಕಾರಣ ಹಲವರು ವಿದೇಶದಲ್ಲಿ ಸಿಲುಕಿರುವ ವಿಷಯ ಈ ಮೊದಲು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡಿದ್ದ ಕಾನ್ಫರೆನ್ಸ್ ನಲ್ಲಿ ತನ್ನ ಗಮನಕ್ಕೆ ಬಂದಿತ್ತು. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಅದರಂತೆ ಅತ್ಯಾವಶ್ಯಕ ವಿಷಯಗಳಾಗಿ ಊರಿಗೆ ಬರಲು ಇಚ್ಛಿಸುವವರ ಮಾಹಿತಿಯನ್ನು ನೀಡಿದರೆ ಅದನ್ನು ನಾಗರಿಕ ವಿಮಾನಯಾನ ಇಲಾಖೆಗೆ ನೀಡಿ ಅದಕ್ಕೆ ಪರಿಹಾರ ಕಾಣಲು ಸೂಚಿಸುತ್ತೇನೆ. ಅದೇರೀತಿ ಈ ಸಂವಾದದಲ್ಲಿ ಉಲ್ಲೇಖಿತ ಎಲ್ಲ ಸಮಸ್ಯೆಗಳ ಬಗ್ಗೆ ಅದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ವೀಡಿಯೋ ಕಾನ್ಫರೆನ್ಸ್ ಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಅದಿ ಬೆಂಗಳೂರು ನೇತೃತ್ವ ವಹಿಸಿದ್ದರು.

ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಾ.ಶೇಖ್ ಬಾವ ಮಂಗಳೂರು, ಪ್ರ.ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಕೋಶಾಧಿಕಾರಿ ಅಬ್ದುಲ್ ಹಮೀದ್ ಸಅದಿ, ಇಕ್ಬಾಲ್ ಕಾಜೂರ್ ದುಬೈ, ರಹೀಮ್ ಸಅದಿ ಖತರ್‌, ಉಮರ್ ಸಖಾಫಿ ಒಮಾನ್, ಜಮಾಲ್ ವಿಟ್ಲ ಬಹರೈನ್, ಝಕರಿಯಾ ಕುವೈತ್, ಸದಕ ಲಂಡನ್, ಹನೀಫ್ ಫ್ರಾನ್ಸ್, ಸಾಲಿಹ್ ಸೌದಿ‌ ಹಾಗೂ ಇನ್ನಿತರ ದೇಶಗಳಲ್ಲಿರುವ ಕೆಸಿಎಫ್ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News