ದೇಶದಲ್ಲಿ ಕೊರೋನ ನಾಗಾಲೋಟ: ಕೇವಲ 4 ದಿನಗಳಲ್ಲಿ 900ಕ್ಕೂ ಅಧಿಕ ಮಂದಿ ಬಲಿ

Update: 2020-06-05 11:47 GMT

ಹೊಸದಿಲ್ಲಿ: ಕೊರೋನವೈರಸ್ ಸೋಂಕು ಪ್ರಕರಣಗಳ ಕುರಿತು ಸರಕಾರ ಅಂಕಿಅಂಶ ಸಂಗ್ರಹಿಸಲು ಆರಂಭಿಸಿದ ನಂತರ ಸೋಂಕಿನಿಂದ ಮೊದಲ 1,000 ಸಾವು ಪ್ರಕರಣಗಳು 48 ದಿನಗಳ ಅವಧಿಯಲ್ಲಿ ವರದಿಯಾಗಿದ್ದರೆ, ಈಗ ನಾಲ್ಕು ದಿನಗಳಲ್ಲಿ ಒಂದು ಸಾವಿರ ಸಾವು ಪ್ರಕರಣಗಳು ವರದಿಯಾಗುತ್ತಿವೆ ಎಂದು  ಆರೋಗ್ಯ ಸಚಿವಾಲಯದ ಕೋವಿಡ್-19 ದತ್ತಾಂಶಗಳನ್ನು  ಪರಿಶೀಲಿಸಿದಾಗ ತಿಳಿದು ಬರುತ್ತದೆ. ದೇಶದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್-19 ತೀವ್ರಗತಿ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಇದು ಪುಷ್ಠೀಕರಿಸುತ್ತದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಎಂಬತ್ತೇಳು ದಿನಗಳ ಅವಧಿಯಲ್ಲಿ ಎಪ್ರಿಲ್ 26ರಂದು ಭಾರತದ ಕೊರೋನ ಪ್ರಕರಣಗಳ ಸಂಕ್ಯೆ 25,000ರ ಗಡಿ ದಾಟಿತ್ತು. ಆದರೆ ಮುಂದಿನ ಆರು ವಾರಗಳಲ್ಲಿ ಈ ಸಂಖ್ಯೆ 2,26,770ಕ್ಕೆ ಏರಿಕೆಯಾಗಿದೆ.

ಕೋವಿಡ್-19ನಿಂದ ಮೊದಲ ಸಾವು ಪ್ರಕರಣ ಮಾರ್ಚ್ 12ರಂದು ವರದಿಯಾಗಿತ್ತು. ಎಪ್ರಿಲ್ 29ರಂದು ಸಾವಿನ ಪ್ರಮಾಣ 1,000ದ ಗಡಿ ದಾಟಿತ್ತು. ಕೆಲವೇ ವಾರಗಳಲ್ಲಿ ಈ ಸಂಖ್ಯೆ 6,075ಗೆ ಏರಿಕೆಯಾಗಿದ್ದರೆ ಇತ್ತೀಚೆಗೆ ಕೇವಲ ನಾಲ್ಕು ದಿನಗಳ ಅಂತರದಲ್ಲಿ 900 ಸಾವು ಪ್ರಕರಣಗಳು ವರದಿಯಾಗಿವೆ.

ಸುಮಾರು ಎರಡು ತಿಂಗಳ ಲಾಕ್‍ಡೌನ್ ನಂತರ ಈಗ ಲಾಕ್‍ಡೌನ್‍ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ನೀಡಿರುವಂತಹ ಸಮಯದಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ.

ನಿಯಮಗಳ ಸಡಿಲಿಕೆಯಿಂದ ಕೊರೋನ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದರೂ ಜನರು ಕೊರೋನವೈರಸ್ ಜತೆ ಬದುಕಲು ಕಲಿಯಬೇಕಿದೆ ಎಂದು ಆರ್ಥಿಕ ಸಂಕಷ್ಟದಲ್ಲಿರುವ ಸರಕಾರ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News