ಚಹಾಲ್ ಕ್ಷಮೆ ಕೋರಿದ ಯುವರಾಜ್ ಸಿಂಗ್

Update: 2020-06-05 17:59 GMT

ಹೊಸದಿಲ್ಲಿ, ಜೂ.5: ಭಾರತದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಜಾತಿಯ ಬಗ್ಗೆ ಹೇಳಿಕೆ ನೀಡಿ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ನಾನು ಎಂದಿಗೂ ಅಸಮಾನತೆಯನ್ನು ನಂಬುವುದಿಲ್ಲ. ಉದ್ದೇಶರಹಿತವಾಗಿ ನೋವುಂಟು ಮಾಡಿದ್ದಕ್ಕೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರೊಂದಿಗೆ ಎಪ್ರಿಲ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಚರ್ಚೆ ನಡೆಸಿದ ವೇಳೆ ಚಹಾಲ್ ಹೆಸರು ಪ್ರಸ್ತಾಪಿಸಿ ಜಾತಿಯ ಬಗ್ಗೆ ಮಾತನಾಡಿದ್ದಾರೆ ಎಂದು ಪಂಜಾಬ್ ಆಟಗಾರ ಯುವರಾಜ್ ವಿರುದ್ಧ ಆರೋಪಿಸಲಾಗಿತ್ತು. ಯುವರಾಜ್ ಇದೀಗ ಟ್ವಿಟರ್‌ನಲ್ಲಿ ಸ್ಪಷ್ಟೀಕರಣದಸಂದೇಶವನ್ನು ಪ್ರಕಟಿಸಿದ್ದಾರೆ.

‘‘ನಾನು ಯಾವತ್ತೂ ಅಸಮಾನತೆಯನ್ನು ನಂಬುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ.ಜಾತಿ, ಬಣ್ಣ,ಮತ ಅಥವಾ ಲಿಂಗದ ಆಧಾರದ ಮೇಲೆ ನಾನು ಯಾವುದೇ ರೀತಿಯ ಅಸಮಾನತೆಯನ್ನು ನಂಬುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ’’ಎಂದು ಯುವರಾಜ್ ಪೋಸ್ಟ್ ಮಾಡಿದ್ದಾರೆ.

‘‘...ಓರ್ವ ಜವಾಬ್ದಾರಿಯುತ ಭಾರತೀಯನಾಗಿ ಯಾರೊಬ್ಬರ ಭಾವನೆಗಳನ್ನು ನೋಯಿಸುವ ಉದ್ದೇಶ ನನ್ನದಲ್ಲ. ಇದಕ್ಕೆ ನಾನು ವಿಷಾದಿಸುತ್ತೇನೆ’’ಎಂದು ಯುವರಾಜ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಚಹಾಲ್ ಜಾತಿಯ ಬಗ್ಗೆ ಮಾತನಾಡಿದ್ದಕ್ಕೆ ಗುರುವಾರ ಯುವರಾಜ್ ವಿರುದ್ಧ ದಲಿತ ಹಕ್ಕುಗಳ ಕಾರ್ಯಕರ್ತ ಹಾಗೂ ವಕೀಲ ರಜತ್ ಕಲ್ಸಾನ್ ಹಿಸಾರ್‌ನ ಹನ್ಸಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದರು. ತಕ್ಷಣವೇ ಯುವರಾಜ್‌ರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದರು. ಹರ್ಯಾಣ ಪೊಲೀಸರು ತನಿಖೆ ಆರಂಭಿಸಿದ ಮರುದಿನವೇ ಯುವರಾಜ್ ಕ್ಷಮೆಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News