ಸಮಾಜದ ಸ್ವಾಸ್ಥ್ಯ ಕಾಪಾಡುವ ‘ಯೋಧ’ರಾದ ಪೊಲೀಸರಿಗೆ ಸೂಕ್ತ ಮನ್ನಣೆ, ಸೌಲಭ್ಯಗಳು ಲಭಿಸಲಿ

Update: 2020-06-06 13:39 GMT

ದೇಶದಲ್ಲಿ ಕಾನೂನಿನ ಆಡಳಿತ ನಡೆಯಬೇಕಿದ್ದರೆ ಮತ್ತು ಜನರು ಸ್ವಪ್ರೇರಣೆಯಿಂದ ಕಾನೂನು ಪಾಲಿಸುವವರಾಗಿರಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ತಮ್ಮ ಜವಾಬ್ದಾರಿಯ ಬಗ್ಗೆ ಪ್ರಜ್ಞಾವಂತರಾಗಿರಬೇಕು. ಆದರೆ ಇದು ಏಕಮುಖಿ ವ್ಯವಹಾರವೇನಲ್ಲ. ಸಮಾಜದಲ್ಲಿ ಸುಸ್ಥಿತಿ ನೆಲೆಸಬೇಕಿದ್ದರೆ ನಾಗರಿಕರು ಮತ್ತು ಕಾನೂನು ಪಾಲಕರಿಬ್ಬರೂ ತಮ್ಮ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಒಂದೆಡೆ ಜನತೆ ಕೇವಲ ತಮ್ಮ ಹಕ್ಕುಗಳ ಮೇಲೆ ಮಾತ್ರ ಕಣ್ಣಿಟ್ಟಿರುವುದು ಪೊಲೀಸರು ತಮ್ಮ ಹಕ್ಕುಗಳ ಮೇಲೆ ಮಾತ್ರ ಕಣ್ಣಿಟ್ಟಿರುವುದು ಅಥವಾ ಜನತೆ ಪೋಲೀಸರ ಕರ್ತವ್ಯಗಳ ಮೇಲೆ ಮಾತ್ರ ಕಣ್ಣಿಟ್ಟಿರುವುದು ಮತ್ತು ಪೊಲೀಸರು ನಾಗರಿಕರ ಕರ್ತವ್ಯಗಳ ಮೇಲೆ ಮಾತ್ರ ಕಣ್ಣಿಟ್ಟಿರುವುದು - ಇದು ಖಂಡಿತ ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದ ಧೋರಣೆಯಲ್ಲ.

ಜನರು ದೇಶದ ಕಾನೂನು ನಿಯಮಗಳನ್ನು ಗೌರವಿಸಬೇಕು, ಜೊತೆಗೆ ಕಾನೂನು ಪಾಲಕರನ್ನೂ ಗೌರವಿಸುತ್ತಿರಬೇಕು. ಹಾಗೆಯೇ ಪೊಲೀಸರು ಜನರ ಕರ್ತವ್ಯಗಳ ಜೊತೆ ಅವರ ಹಕ್ಕುಗಳನ್ನೂ ಸದಾ ನೆನಪಿಟ್ಟುಕೊಂಡಿರಬೇಕು. ನಾಗರಿಕರು ಮತ್ತು ಕಾನೂನು ಪಾಲಕರ ನಡುವೆ ಪರಸ್ಪರ ಗೌರವ ಮತ್ತು ವಿಶ್ವಾಸದ ವಾತಾವರಣ ಇರಬೇಕಾದುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಬಹಳ ಅವಶ್ಯಕ. 

ನಾಗರಿಕರು ಕಾನೂನು ಪಾಲಿಸುವಂತೆ ನೋಡಿಕೊಳ್ಳಬೇಕಾದ ಪೊಲೀಸರು ಸ್ವತಃ ಸುರಕ್ಷಿತ ಹಾಗೂ ನೆಮ್ಮದಿಯ ಸ್ಥಿತಿಯಲ್ಲಿರಬೇಕು. ಹಾಗೆಯೇ ಜನರ ಕರ್ತವ್ಯಗಳ ಜೊತೆ ಅವರ ಹಕ್ಕುಗಳ ಬಗ್ಗೆಯೂ ಸಾಕಷ್ಟು ತಿಳುವಳಿಕೆ ಹಾಗೂ ಜಾಗೃತಿ ಉಳ್ಳವರಾಗಿರಬೇಕು.

ದೇಶದ ಪೊಲೀಸರ ಪರಿಸ್ಥಿತಿ, ಅವರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕೊರತೆ, ಅವಶ್ಯಕತೆಗಿಂತ ಕಡಿಮೆ ಸಂಖ್ಯೆಯಲ್ಲಿರುವ ಸಿಬ್ಬಂದಿ ಮತ್ತು ಈ ಕೊರತೆಗಳಿಂದ ಸ್ವತಃ ಪೊಲೀಸರು ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರಗಳು ಗಂಭೀರ ಚಿಂತನೆಯನ್ನು ನಡೆಸಲು ವಿಫಲವಾಗುತ್ತಲೇ ಇವೆ. ಈಗಾಗಲೇ ಪೊಲೀಸ್ ವ್ಯವಸ್ಥೆಯಲ್ಲಿರುವ ಹಲವು ಸಮಸ್ಯೆಗಳ ಬಗ್ಗೆ ತಜ್ಞರು ವರದಿಗಳನ್ನು ನೀಡಿದ್ದಾರೆ. ಹೆಚ್ಚಿನ ವರದಿಗಳು   ಸೌಲಭ್ಯಗಳ ಕೊರತೆ ಮತ್ತು ಸಿಬ್ಬಂದಿ ಕೊರತೆಯ ಸಮಸ್ಯೆಗಳನ್ನು ಎತ್ತಿ ಹಿಡಿದಿವೆ.

ಸದ್ಯ ದೇಶ ಕೊರೋನ ವೈರಸ್ ಮಹಾಮಾರಿಯ ವಿರುದ್ಧ ಹೋರಾಟ ನಡೆಸುತ್ತಿರಬೇಕಾದರೆ, ಈ ಹೋರಾಟದಲ್ಲಿ ವೈದ್ಯರ ಜೊತೆಜೊತೆಗೆ ಮುಂಚೂಣಿಯಲ್ಲಿರುವವರು ಪೊಲೀಸರು. ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿ ಜನರು ಮನೆಗಳಲ್ಲಿ ಸುರಕ್ಷಿತರಾಗಿ ಇರುವಾಗ, ತಮ್ಮ ಜೀವ ಪಣಕ್ಕಿಟ್ಟು, ಲಭ್ಯ ಸುರಕ್ಷತಾ ಸಾಧನಗಳನ್ನು ಬಳಸಿಕೊಂಡು ಹಗಲು-ರಾತ್ರಿಯೆನ್ನದೆ ಕೊರೋನ ಹರಡುವಿಕೆಯನ್ನು ತಡೆಯಲು ಸಂಪೂರ್ಣವಾಗಿ ಶ್ರಮಿಸಿದ ಶ್ರೇಯ ಆರಕ್ಷಕರಿಗೆ ಸಲ್ಲಬೇಕು. ದೇಶದಲ್ಲಿ ಸಂಭವಿಸಿದ ಕೆಲವೊಂದು ಘಟನೆಗಳನ್ನು ಹೊರತುಪಡಿಸಿ ನೋಡುವುದಾದರೆ ಕೊರೋನ ಬಿಕ್ಕಟ್ಟಿನ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸೇವೆ ಅಭಿನಂದನಾರ್ಹ. ಆದರೆ ಕೊರೋನ ಸಂದರ್ಭದಲ್ಲಿ ಮಾತ್ರವಲ್ಲದೆ ಇತರ ಸಂದರ್ಭಗಳಲ್ಲೂ ವರ್ಷದ ಎಲ್ಲಾ ದಿನ ಅಹರ್ನಿಶಿ ಸೇವೆ ಸಲ್ಲಿಸುವ ಪೊಲೀಸರಿಗೆ ಸೂಕ್ತ ಸೌಲಭ್ಯಗಳನ್ನು ನೀಡಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ‘ಇಲ್ಲ’ ಎನ್ನುವ ಉತ್ತರವೇ ಲಭಿಸುತ್ತದೆ.

ಪೊಲೀಸರಿಗೆ ಸೂಕ್ತ ಸೌಲಭ್ಯಗಳ ಕೊರತೆಯಿದೆ ಎನ್ನುವ ಆರೋಪಗಳೇನೂ ಹೊಸತಲ್ಲ. ದುರದೃಷ್ಟವಶಾತ್ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿಲ್ಲ ಮತ್ತು ಅದಕ್ಕಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿಲ್ಲ. ಪೊಲೀಸ್ ಸಿಬ್ಬಂದಿಗೆ ನೀಡಲಾಗುವ ಸರಕಾರಿ ಕ್ವಾಟ್ರರ್ಸ್ ಗಳಲ್ಲಿರುವ ಅವ್ಯವಸ್ಥೆಗಳು ಹಲವಾರು ಎನ್ನುವ ಆರೋಪಗಳಿವೆ. ಹಲವು ಕಡೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ  ಪ್ರಾಥಮಿಕ ಸೌಲಭ್ಯಗಳ ಕೊರತೆಗಳಿವೆ. ಇಂತಹ ಸಂದರ್ಭಗಳಲ್ಲಿ ಪೊಲೀಸರ ಕುಟುಂಬಗಳು ಸರಕಾರಿ ಕ್ವಾಟ್ರರ್ಸ್ ಗಳಲ್ಲಿ ಬೇರೆ ಆಯ್ಕೆಗಳಿಲ್ಲದೆ ಜೀವನ ನಡೆಸಬೇಕಾಗುತ್ತದೆ. ಕೆಲವೊಂದು ಪೊಲೀಸ್ ಠಾಣೆಗಳಲ್ಲೂ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಗಳ ಬಗ್ಗೆಯೂ ಆರೋಪವಿದೆ. ಕುಡಿಯುವ ನೀರಿನ ಕೊರತೆ, ನೈರ್ಮಲ್ಯರಹಿತ ಶೌಚಾಲಯಗಳು, ಕೆಲವೆಡೆಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಅತ್ಯಗತ್ಯವಾದ ವೈರ್ ಲೆಸ್ ಗಳ, ದೂರವಾಣಿಗಳ ಕೊರತೆಗಳಿವೆ ಎನ್ನುವುದನ್ನು ಹಲವು ವರದಿಗಳು ಬೆಟ್ಟು ಮಾಡಿವೆ.

ಆಧುನಿಕ ತಂತ್ರಜ್ಞಾನಗಳು, ಉಪಕರಣಗಳಿದ್ದರೂ ಇನ್ನೂ ಹಳೆಯ ಕಾಲದ ಉಪಕರಣಗಳನ್ನೇ ಬಳಸುವಂತೆ ನಮ್ಮ ಆಡಳಿತ ವ್ಯವಸ್ಥೆ ಸೃಷ್ಟಿಸಿರುವ ಪರಿಸ್ಥಿತಿಯು ಪೊಲೀಸ್ ಇಲಾಖೆ ದಶಕಗಳಿಂದೀಚೆಗೆ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಲವು ರೀತಿಯ ಸುಧಾರಣೆಗಳು ಅತ್ಯವಶ್ಯಕವಾಗಿವೆ. ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವ, ಗಸ್ತು ಕಾಯುವ ಪೊಲೀಸ್ ಸಿಬ್ಬಂದಿಗೆ ತಂಗಲು ವ್ಯವಸ್ಥೆ, ಆಹಾರದ ವ್ಯವಸ್ಥೆಗಳ ಬಗ್ಗೆ ಯಾರೂ ಕೇಳುವವರಿಲ್ಲ. ಇನ್ನು ಅವಶ್ಯಕತೆಗಿಂತ ಕಡಿಮೆ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯಿರುವ ಕಾರಣದಿಂದಾಗಿ ಎದುರಾಗುವ ಬಹುಮುಖ್ಯ ಸಮಸ್ಯೆಯೆಂದರೆ ಆರಕ್ಷಕರಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡಗಳು. ದೀರ್ಘಾವಧಿಯ ಕಠಿಣ ಕೆಲಸ, ವಿಶ್ರಾಂತಿಗಾಗಿ ವ್ಯವಸ್ಥೆಗಳ ಕೊರತೆಯ ಪರಿಣಾಮ ಎಲ್ಲಾ ಸಂದರ್ಭಗಳಲ್ಲೂ ಪೊಲೀಸ್ ಸಿಬ್ಬಂದಿ ಒತ್ತಡ ಮತ್ತು ಬಳಲಿಕೆಯ ಜೊತೆಗೆ ಕೆಲಸ ಮಾಡಬೇಕಾಗುತ್ತದೆ. ಪೊಲೀಸರು ಸರಾಸರಿ 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು,ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ.  ಇದಕ್ಕೆ ಸಿಬ್ಬಂದಿ ಕೊರತೆಯೇ ಪ್ರಮುಖ ಕಾರಣ ಎಂದು 2019ರ ವರದಿಯೊಂದು ತಿಳಿಸುತ್ತದೆ. ಸೂಕ್ತ ತರಬೇತಿಗಳ ಕೊರತೆಯೂ ಪೊಲೀಸ್ ಸಿಬ್ಬಂದಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು, ಕಳೆದ 5 ವರ್ಷಗಳಲ್ಲಿ ಕೇವಲ 6.4 ಶೇ. ಪೊಲೀಸರು ಮಾತ್ರ ಅವಶ್ಯ ತರಬೇತಿಯನ್ನು ಪಡೆದಿದ್ದಾರೆ ಎನ್ನುವುದನ್ನು ಅದು ಬೆಟ್ಟು ಮಾಡಿದೆ.

ಪೊಲೀಸ್ ಠಾಣೆಗಳಲ್ಲಿ ವಾಹನಗಳ ಕೊರತೆಯಿದೆ ಎನ್ನುವ ಆರೋಪಗಳು ಇಂದು-ನಿನ್ನೆಯದ್ದಲ್ಲ. ತುರ್ತು ಸಂದರ್ಭಗಳಲ್ಲಿ, ಗಲಭೆ, ಘರ್ಷಣೆ, ಪ್ರತಿಭಟನೆ, ಅಪರಾಧ ಕೃತ್ಯಗಳು, ಅಪಘಾತದಂತಹ ಸಂದರ್ಭಗಳಲ್ಲಿ ವಾಹನಗಳ ಕೊರತೆಯಿಂದ ಪೊಲೀಸ್ ಸಿಬ್ಬಂದಿ ಪಡುವ ಪಾಡು ಹೇಳತೀರದು.

ರಾಜಕೀಯ ಒತ್ತಡ

ನಿಯಮ ಪಾಲನೆ, ಕಾನೂನು ರಕ್ಷಣೆಯ ವಿಚಾರದಲ್ಲಿ ತಪ್ಪುಗಳಾದಾಗ ಪೊಲೀಸರು ಮೊದಲ ತಪ್ಪಿತಸ್ಥರಂತೆ ಜನರ ಕಣ್ಣಿಗೆ ಬೀಳುತ್ತಾರೆ. ಆದರೆ ಇದರ ಹಿಂದಿರುವ ರಾಜಕೀಯ ಒತ್ತಡಗಳು ಯಾರ ಕಣ್ಣಿಗೂ ಬೀಳುವುದಿಲ್ಲ. ಇಂತಹ ತಪ್ಪುಗಳಾದಾಗ ಆಡಳಿತ ಪಕ್ಷದ ಪರವಾಗಿರುವವರು, ಹಿಂದಿನ ಸರಕಾರದ ವೇಳೆ ಪೊಲೀಸರು ನಡೆಸಿದ ತಪ್ಪುಗಳನ್ನು ಎತ್ತಿತೋರಿಸಿದರೆ, ಸರಕಾರದ ವಿರುದ್ಧವಾಗಿರುವವರು ಪೊಲೀಸರನ್ನು ನೇರ ಗುರಿ ಮಾಡುತ್ತಾರೆ. ಆದರೆ ಇದ್ಯಾವುದಕ್ಕೂ ಉತ್ತರ ಕೊಡಲಾಗದೆ, ರಾಜಕೀಯ ಒತ್ತಡದ ಕಾರಣವನ್ನು ತಿಳಿಸಲಾಗದೆ ಪೊಲೀಸರು ಸುಮ್ಮನಾಗಬೇಕಾಗುತ್ತದೆ. ನ್ಯಾಯಾಂಗದಲ್ಲಿ ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದೆ ನ್ಯಾಯವನ್ನು ಎತ್ತಿಹಿಡಿಯಬೇಕಾಗಿರುವುದು ಆದ್ಯ ಕರ್ತವ್ಯವಾಗಿದ್ದರೂ ನಮ್ಮ ಆಡಳಿತ ವ್ಯವಸ್ಥೆ ಹಾಗಿಲ್ಲವಲ್ಲ ಎನ್ನುವುದು ಕೂಡ ಕಟುಸತ್ಯ.

ಜಾಗತಿಕವಾಗಿ ಮುಂದುವರಿಯುತ್ತಿರುವ ತಂತ್ರಜ್ಞಾನದ ಜೊತೆಗೆ ಪೊಲೀಸರು ತಾಂತ್ರಿಕವಾಗಿ ಎದುರಿಸುತ್ತಿರುವ ಸವಾಲುಗಳೂ ಹೆಚ್ಚುತ್ತಿವೆ. ಸೈಬರ್ ದಾಳಿಗಳು, ಬ್ಯಾಂಕ್ ವಂಚನೆಗಳು, ಆಫರ್ ನೀಡುವ ಹೆಸರಲ್ಲಿ ಹಣ ದೋಚುವವರು, ಸಿಮ್ ಸ್ವಾಪ್ ನಡೆಸುವವರು, ಅನ್ಎಥಿಕಲ್ ಹ್ಯಾಕರ್ ಗಳು ಹೀಗೆ ಹತ್ತು ಹಲವು ಸವಾಲುಗಳನ್ನು ನಿಭಾಯಿಸುವುದೇ ಪೊಲೀಸರ ಮುಂದಿರುವ ಬಹುದೊಡ್ಡ ಸವಾಲು. ಈ ನಿಟ್ಟಿನಲ್ಲಿ ಪೊಲೀಸರಿಗೆ ಸೂಕ್ತ ತರಬೇತಿ, ಹ್ಯಾಕಿಂಗ್, ಸೈಬರ್ ಕ್ಷೇತ್ರದಲ್ಲಿ ತರಬೇತಿಗಳನ್ನು ನೀಡುವ ಕೆಲಸಗಳು ಅಷ್ಟಾಗಿ ನಡೆಯುತ್ತಿಲ್ಲ. ಕೆಲವೊಂದು ಪ್ರಮುಖ ನಗರಗಳಲ್ಲಿ, ಮುಖ್ಯ ಠಾಣೆಗಳಿಗೆ ಮಾತ್ರ ಇದು ಸೀಮಿತವಾಗಿದೆ. ಹೀಗಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಠಾಣೆಗಳು ಇಂತಹ ಮುಖ್ಯ ಠಾಣೆಯ ಸೈಬರ್ ತಜ್ಞರನ್ನು ಆಶ್ರಯಿಸಬೇಕಾದ ಅಗತ್ಯಗಳಿರುತ್ತವೆ. ಇದು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ಮೇಲಿರುವ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇಂದು ಜಗತ್ತು ಮುಂದುವರಿಯುತ್ತಿರುವ ಜೊತೆಜೊತೆಗೆ ಸಾಮಾಜಿಕ ಸಮಸ್ಯೆಗಳು, ದೊಂಬಿಗಳು, ಗಲಾಟೆಗಳು, ಅಪರಾಧ ಕೃತ್ಯಗಳು, ವಂಚನೆಗಳು ಹೆಚ್ಚುತ್ತಲೇ ಇವೆ. ಎಲ್ಲಾ ಸಮಸ್ಯೆಗಳನ್ನು ಮುಂದಿನ ಸಾಲಿನಲ್ಲಿ ನಿಂತು ಎದುರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ನಿರಂತರ ಪ್ರಯತ್ನಗಳನ್ನು ಪೊಲೀಸರು ಮಾಡುತ್ತಲೇ ಇದ್ದಾರೆ. ಅವರಿಗಿರುವ ಕೆಲಸದ, ರಾಜಕೀಯದ, ಸೂಕ್ತ ಸೌಲಭ್ಯಗಳಿಲ್ಲದ ಒತ್ತಡಗಳನ್ನೆಲ್ಲಾ ಎದುರಿಸುತ್ತಲೇ ತಮ್ಮ ಕೆಲಸ ಮುಂದುವರಿಸಿದ್ದಾರೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದ, ಹೇಳಿದರೆ ಅದು ತಿರುಗುಬಾಣವಾಗಿ ಕೆಲಸವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಪೊಲೀಸರ ಮುಂದಿದೆ. ಅವರಿಗೆ ಸಿಗಬೇಕಾದ ಮಾನ್ಯತೆಗಳು ಹಲವು ಸಂದರ್ಭಗಳಲ್ಲಿ ಸಿಕ್ಕಿಲ್ಲ ಮತ್ತು ಹಲವು ಸಂದರ್ಭಗಳಲ್ಲಿ ಮಾಡದ ತಪ್ಪಿಗಾಗಿ, ರಾಜಕೀಯ ಒತ್ತಡಕ್ಕಾಗಿ ಅವರು ತಪ್ಪುಗಳನ್ನು ತಮ್ಮ ಮೇಲೆಯೇ ಹೊರಿಸಿ ಮುಂದೆ ಸಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಈ ನಡುವೆ ಕೋವಿಡ್ 19 ಸಂದರ್ಭದಲ್ಲಂತೂ ಪೊಲೀಸರ ಸೇವೆಯನ್ನು ಅಭಿನಂದಿಸಲೇಬೇಕು. ಕೊರೋನ ಬಿಕ್ಕಟ್ಟಿನ ಆರಂಭದಲ್ಲಿ ದೇಶಾದ್ಯಂತ ಜಿಲ್ಲೆಗಳಲ್ಲಿ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ, ಗಡಿಗಳನ್ನು ಕಾಯುತ್ತಾ, ತಾವೂ ಸೋಂಕಿತರಾಗಬಹುದು ಎನ್ನುವ ಭಯವಿದ್ದರೂ ಅದ್ಯಾವುದನ್ನೂ ಯೋಚಿಸದೆ ವೈರಸ್ ಹರಡುವಿಕೆಯನ್ನು ತಡೆಯಲು ಸಾಕಷ್ಟು ಶ್ರಮಿಸಿದ್ದಾರೆ. ಈಗಾಗಲೇ ಹಲವು ಪೊಲೀಸರು ವೈದ್ಯರಂತೆಯೇ ಕೊರೋನ ಸೋಂಕಿಗೊಳಗಾಗಿದ್ದಾರೆ. ಅವರಲ್ಲಿ ಹಲವರು ಈಗಾಗಲೇ ಮೃತಪಟ್ಟಿದ್ದಾರೆ.

ಪೊಲೀಸರಿಗೆ ಬೇಕಾಗಿರುವುದು ಮೂಲಭೂತ, ಅಗತ್ಯ ಸೌಲಭ್ಯಗಳು, ಆಧುನಿಕ ಜಗತ್ತಿನಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ತರಬೇತಿ, ಕೋಟ್ಯಾಂತರ ಜನರಿರುವ ದೇಶದ ಸಾಮಾಜಿಕ ವ್ಯವಸ್ಥೆ ಸುವ್ಯವಸ್ಥಿತವಾಗಿರುವಂತೆ ಕಾಪಾಡಲು ಬೇಕಾದ ಮಾನವಶಕ್ತಿ ಮತ್ತು ಸರಕಾರ ಹಾಗು ಸಮಾಜದ ಬೆಂಬಲ. ಈ ಎಲ್ಲಾ ಸೌಲಭ್ಯಗಳು ಅವರಿಗೆ ಲಭ್ಯವಾಗಿಸುವುದು ಸರಕಾರದ ಆದ್ಯ ಕರ್ತವ್ಯವಾಗಲಿ,

Similar News