ಭಾರತ, ಚೀನಾದಲ್ಲಿ ಹೆಚ್ಚು ಪರೀಕ್ಷೆ ನಡೆದರೆ ಕೊರೋನ ಸೋಂಕು ಪ್ರಕರಣಗಳಲ್ಲಿ ಅಮೆರಿಕವನ್ನು ಹಿಂದಿಕ್ಕುತ್ತವೆ: ಟ್ರಂಪ್

Update: 2020-06-06 16:15 GMT

ವಾಶಿಂಗ್ಟನ್, ಜೂ. 6: ಭಾರತ ಮತ್ತು ಚೀನಾಗಳು ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸಿದರೆ, ಆ ದೇಶಗಳಲ್ಲಿ ಅಮೆರಿಕಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪ್ರಸಕ್ತ ಕೊರೋನ ವೈರಸ್ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಅಮೆರಿಕ ಜಗತ್ತಿನಲ್ಲೇ ನಂಬರ್ ಒಂದನೇ ಸ್ಥಾನದಲ್ಲಿದೆ.

ಅಮೆರಿಕ ಈವರೆಗೆ 2 ಕೋಟಿ ಪರೀಕ್ಷೆಗಳನ್ನು ನಡೆಸಿದೆ ಎಂದು ಮೈನ್ ರಾಜ್ಯದಲ್ಲಿನ ಪ್ಯೂರಿಟನ್ ಮೆಡಿಕಲ್ ಪ್ರಾಡಕ್ಟ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಟ್ರಂಪ್ ಹೇಳಿದರು.

ಅಮೆರಿಕಕ್ಕೆ ಹೋಲಿಸಿದರೆ, ಜರ್ಮನಿಯು 40 ಲಕ್ಷ ಮತ್ತು ಭಾರೀ ಸುದ್ದಿಯಲ್ಲಿರುವ ದಕ್ಷಿಣ ಕೊರಿಯ 30 ಲಕ್ಷ ಪರೀಕ್ಷೆಗಳನ್ನು ನಡೆಸಿವೆ ಎಂದು ಟ್ರಂಪ್ ನುಡಿದರು.

ಜಾನ್ಸ್ ಹಾಪ್‌ಕಿನ್ಸ್ ಕೊರೋನ ವೈರಸ್ ರಿಸೋರ್ಸ್ ಸೆಂಟರ್‌ನ ಅಂಕಿ-ಅಂಶಗಳ ಪ್ರಕಾರ, ಅಮೆರಿಕದಲ್ಲಿ ಸುಮಾರು 19 ಲಕ್ಷ ಸೋಂಕು ಪ್ರಕರಣಗಳು ಮತ್ತು 1.09 ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಅದೇ ವೇಳೆ, ಭಾರತ ಮತ್ತು ಚೀನಾಗಳಲ್ಲಿ ವರದಿಯಾಗಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಕ್ರಮವಾಗಿ 2,36,184 ಮತ್ತು 84,177.

ಭಾರತ ಈವರೆಗೆ 40 ಲಕ್ಷಕ್ಕೂ ಅಧಿಕ ಕೊರೋನ ವೈರಸ್ ಪರೀಕ್ಷೆಗಳನ್ನು ನಡೆಸಿದೆ ಎಂದು ಭಾರತದ ಆರೋಗ್ಯ ಇಲಾಖೆ ತಿಳಿಸಿದೆ.

ನಾವು 2 ಕೋಟಿಗಿಂತಲೂ ಅಧಿಕ ಪರೀಕ್ಷೆಗಳನ್ನು ನಡೆಸಿದ್ದೇವೆ. ನೆನಪಿಟ್ಟುಕೊಳ್ಳಿ, ಹೆಚ್ಚೆಚ್ಚು ಪರೀಕ್ಷೆಗಳು ನಡೆದಂತೆ, ಹೆಚ್ಚೆಚ್ಚು ಪ್ರಕರಣಗಳು ಹೊರಬರುತ್ತವೆ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News