ಈ ಹತ್ತು ರಾಜ್ಯಗಳಲ್ಲಿ ಕೊರೋನ ಮರಣ ಮೃದಂಗ!

Update: 2020-06-07 03:46 GMT

ಹೊಸದಿಲ್ಲಿ, ಜೂ.7: ದೇಶದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ಒಟ್ಟು ಮಂದಿಯ ಪೈಕಿ ಶೇಕಡ 95ರಷ್ಟು ಮಂದಿ ಹತ್ತು ರಾಜ್ಯಗಳಿಗೆ ಸೇರಿದವರು ಎನ್ನುವುದು ಕೊರೋನ ಸೋಂಕಿನ ಬಗೆಗಿನ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.

ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಬಿಹಾರದಲ್ಲಿ ಒಟ್ಟು ಪ್ರಕರಣಗಳ ಪೈಕಿ ಶೇಕಡ 84ರಷ್ಟು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಮೃತಪಟ್ಟವರ ಪೈಕಿ ಈ ರಾಜ್ಯಗಳ ಪಾಲು ಶೇಕಡ 95ರಷ್ಟಾಗಿದೆ.

ಪ್ರತಿ 10 ಲಕ್ಷ ಮಂದಿಯ ಪೈಕಿ ಗರಿಷ್ಠ ಸಂಖ್ಯೆಯ ತಪಾಸಣೆಗಳನ್ನು ನಡೆಸಿರುವ ರಾಜ್ಯಗಳೆಂದರೆ ದಿಲ್ಲಿ, ತಮಿಳುನಾಡು, ರಾಜಸ್ಥಾನ, ಕರ್ನಾಟಕ ಮತ್ತು ಮಹಾರಾಷ್ಟ್ರ. ಆದರೆ ಪ್ರತಿ 10 ಲಕ್ಷ ಮಂದಿಯ ಪೈಕಿ ಗರಿಷ್ಠ ಸೋಂಕಿತರಿರುವ ರಾಜ್ಯಗಳ ಅನುಕ್ರಮಣಿಕೆ ಬದಲಾಗಿದ್ದು, ದಿಲ್ಲಿ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನ ಮೊದಲ ಐದು ಸ್ಥಾನಗಳಲ್ಲಿವೆ.

ದೇಶದಲ್ಲಿ ಸೋಂಕಿನಿಂದ ಮೃತಪಟ್ಟ ಒಟ್ಟು ಮಂದಿಯ ಪೈಕಿ ಶೇಕಡ 83ರಷ್ಟು ಮಂದಿ ಮಹಾರಾಷ್ಟ್ರ, ಗುಜರಾತ್, ದಿಲ್ಲಿ, ಮಧ್ಯಪ್ರದೇಶ ಮತ್ತು ಬಂಗಾಳ ರಾಜ್ಯದವರು. ಆದರೆ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಾವಿನ ದರ ಗರಿಷ್ಠ ದಾಖಲಾಗಿರುವುದು ಗುಜರಾತ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಹಾಗೂ ದಿಲ್ಲಿಯಲ್ಲಿ. ಆದ್ದರಿಂದ ಅಧಿಕ ಮಂದಿಯ ತಪಾಸಣೆ ನಡೆಸಿದ ರಾಜ್ಯಗಳಲ್ಲಿ ಅಧಿಕ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಇತರ ಯಾವುದೇ ರಾಜ್ಯಗಳಿಗೆ ಹೋಲಿಸಿದರೆ ಗರಿಷ್ಠ ತಪಾಸಣೆ ನಡೆದಿರುವುದು ಮಹಾರಾಷ್ಟ್ರದ ಮುಂಬೈ ನಗರದಲ್ಲಿ. ಮಹಾರಾಷ್ಟ್ರ, ಗುಜರಾತ್, ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ಸಾವಿನ ದರ ಶೇಕಡ 4ರಿಂದ 6ರವರೆಗೂ ಇದ್ದು, ದಿಲ್ಲಿ, ತಮಿಳುನಾಡು, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ಈ ಪ್ರಮಾಣ ಶೇಕಡ 3ಕ್ಕಿಂತ ಕಡಿಮೆ. ದೇಶದಲ್ಲಿ ಜೂನ್ 6ರವರೆಗೆ ದೃಢಪಟ್ಟಿರುವ 2.37 ಲಕ್ಷ ಪ್ರಕರಣಗಳ ಪೈಕಿ 2 ಲಕ್ಷ ಪ್ರಕರಣಗಳು ಅಗ್ರ 10 ರಾಜ್ಯಗಳಿಂದ ವರದಿಯಾಗಿವೆ. 6,650 ಸಾವುಗಳ ಪೈಕಿ 6,300 ಸಾವು ಈ ರಾಜ್ಯಗಳಲ್ಲಿ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News