ಭಾರತದಲ್ಲಿ ಕೋವಿಡ್ ಮರಣದರದ ಸರಕಾರಿ ಲೆಕ್ಕಾಚಾರಗಳು ಅವೈಜ್ಞಾನಿಕವೇ?

Update: 2020-06-07 05:49 GMT

ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2.5 ಲಕ್ಷಗಳನ್ನು ಸಮೀಪಿಸುತ್ತಾ  ಕೋವಿಡ್ ಸೋಂಕಿತ ದೇಶಗಳಲ್ಲಿ ಆರನೇ  ಸ್ಥಾನ ತಲುಪಿದ್ದರೂ, ಮೋದಿ ಸರ್ಕಾರ ಮಾತ್ರ ಕೋವಿಡ್ ವಿರುದ್ಧ ಯುದ್ಧದಲ್ಲಿ ಭಾರತ ಗೆದ್ದೇ ಬಿಟ್ಟಿತು ಎಂಬಂತೆ ಪ್ರಚಾರ ಮಾಡುತ್ತಿದೆ. ಈ ಪ್ರಚಾರಕ್ಕೆ ಸರಕಾರವು ಭಾರತದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಾಗಿರುವುದನ್ನೂ ಹಾಗು ಇತರ ದೇಶಗಳಿಗೆ ಹೋಲಿಸಿದಲ್ಲಿ ಕೋವಿಡ್ ಸೋಂಕಿನಿಂದ ಸತ್ತವರ ಸಂಖ್ಯೆ ಅತ್ಯಂತ ಕಡಿಮೆ ಎನ್ನುವುದನ್ನು ಕಾರಣವಾಗಿ ಮುಂದಿಡುತ್ತಿದೆ.

ವಾಸ್ತವದಲ್ಲಿ,  ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಚೇತರಿಸಿಕೊಂಡವರ ಸಂಖ್ಯೆಯನ್ನು ಕಳೆದು ಭಾರತದಲ್ಲಿರುವ ಸಕ್ರಿಯ ಸೋಂಕಿತರ ಸಂಖ್ಯೆಯನ್ನು ಮಾತ್ರ ಲೆಕ್ಕ ಹಾಕಿದರೂ ಸಹ  ಜೂನ್ 5ರ ವೇಳೆಗೆ ಭಾರತವು ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ (1,15,935) ಜಗತ್ತಿನಲ್ಲೇ ನಾಲ್ಕನೇ  ಸ್ಥಾನದಲ್ಲಿತ್ತು. (https://www.worldometers.info/coronavirus/).

ಭಾರತ ಸರ್ಕಾರದ ಪ್ರಕಾರ ಭಾರತದಲ್ಲಿ ಕೋವಿಡ್ ಮರಣ ದರ  ಎಪ್ರಿಲ್ ತಿಂಗಳಲ್ಲಿ ಶೇ. 3.38  ಇದ್ದದ್ದು ಮೇ ತಿಂಗಳಲ್ಲಿ ಶೇ. 2.87ಕ್ಕೆ ಇಳಿದಿದೆ. ಇದು ಇಡೀ ಜಗತ್ತಿನಲ್ಲಿ ಅತ್ಯಂತ ಕಡಿಮೆ ದರಗಳಲ್ಲಿ ಒಂದು ಎಂಬುದು ಮೋದಿ ಸರ್ಕಾರದ  ವಾದ.

ಆದರೆ ಈಗ ಜಗತ್ತಿನ ಪ್ರತಿಯೊಂದು ದೇಶಗಳ ಕೋವಿಡ್ ವಿವರಗಳು ಸುಲಭವಾಗಿ ಲಭ್ಯವಿದೆ. ಮಾತ್ರವಲ್ಲ. ಬಹುಪಾಲು ದೇಶಗಳು ತಮ್ಮ ಲೆಕ್ಕಾಚಾರಗಳ ಪ್ರಕ್ರಿಯೆಯಗಳನ್ನು ಪಾರದರ್ಶಕವಾಗಿ ಜಗತ್ತಿನ ಮುಂದಿಡುತ್ತಿವೆ. ಈ ಲಭ್ಯ ಮಾಹಿತಿಗಳನ್ನು ಮುಂದಿಟ್ಟುಕೊಂಡು ಭಾರತ ಸರ್ಕಾರದ ಹೇಳಿಕೆಯನ್ನು ಗಮನಿಸಿದಾಗ ಭಾರತ ಸರ್ಕಾರದ ಹೇಳಿಕೆಯಲ್ಲಿ ಸತ್ಯಕ್ಕಿಂತ ಬಡಾಯಿಯೇ ಹೆಚ್ಚಿದೆಯೆಂಬುದು ಗೊತ್ತಾಗುತ್ತದೆ.

1. ಮೊದಲನೆಯದಾಗಿ, ಕೋವಿಡ್ ಮರಣವನ್ನು ಭಾರತದಲ್ಲಿ ಲೆಕ್ಕ ಹಾಕುವ ರೀತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯನ್ನೂ ಒಳಗೊಂಡಂತೆ ವಿಶ್ವದಾದ್ಯಂತ ಸಾಂಕ್ರಾಮಿಕ ತಜ್ಞರೂ ಹಾಗೂ ವೈದ್ಯಾಧಿಕಾರಿಗಳು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಒಟ್ಟಾರೆ ಕೋವಿಡ್ ಮರಣವನ್ನು ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆಯಿಂದ  ಭಾಗಿಸುವುದರ ಮೂಲಕ ಕೋವಿಡ್ ಮರಣವನ್ನು ಲೆಕ್ಕ ಹಾಕಲಾಗುತ್ತದೆ. ಆದರೆ ಸಾಂಕ್ರಾಮಿಕ ರೋಗ ತಜ್ನರ ಪ್ರಕಾರ ಈ ಲೆಕ್ಕಾಚಾರ ತಪ್ಪು.

2013ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೈಕೆಲ್ ಲೆವಿಟ್ ಅವರೂ ಭಾಗವಾಗಿರುವ Sapio Analytics ಎಂಬ ಸರ್ಕಾರಿ ಸಮಾಲೋಚಕ ಸಂಸ್ಥೆಯ ಪ್ರಕಾರ ಕೋವಿಡ್ ಸೋಂಕು ಅಂದಾಜು 21 ದಿನಗಳಿರುತ್ತವೆ. ಹೀಗಾಗಿ ಪ್ರತಿದಿನದ ಕೋವಿಡ್ ಸಾವಿನ ಪ್ರಮಾಣವನ್ನು ಲೆಕ್ಕಿಸಲು ಅಂದಿನ ದಿನದ ಸಾವಿನ ಸಂಖ್ಯೆಯನ್ನು 21 ದಿನಗಳ ಸರಾಸರಿಯಿಂದ ಭಾಗಿಸಬೇಕು.  ಆಗ ಮಾತ್ರ ಕೋವಿಡ್ ಸಾವುಗಳಲ್ಲಿ ಆಗುತ್ತಿರುವ ಏರುಪೇರುಗಳು ಗೊತ್ತಾಗುತ್ತವೆ. ಒಟ್ಟು ಸಾವುಗಳನ್ನು ಒಟ್ಟು ಸೋಂಕಿತರಿಂದ ಭಾಗಿಸಿದರೆ ಈ ನಿಖರತೆ ಮತ್ತು ಏರುಪೇರುಗಳು ತಿಳಿಯಬರುವುದಿಲ್ಲ.

 (https://www.outlookindia.com/website/story/india-news-indias-covid-19-death-rate-could-be-higher-than-the-us-govt-advisory-firm/353801).

ಉದಾಹರಣೆಗೆ ಜೂನ್ 5ರ ವೇಳೆಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,36,657. ಭಾರತದಲ್ಲಿ ಈವರೆಗಿನ ಒಟ್ಟು ಕೋವಿಡ್ ಸಾವುಗಳು 6,649. ಹೀಗಾಗಿ ಭಾರತ ಸರ್ಕಾರದ ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಕೋವಿಡ್ ಮರಣದರ 6,649/2,36,657 X100 = 2.8.

ಆದರೆ ದೇಶ-ವಿದೇಶಗಳ ವೈದ್ಯಕೀಯ ಪರಿಣಿತರ ಪ್ರಕಾರ ಮರಣ ದರವನ್ನು ಹೀಗೆ ಲೆಕ್ಕ ಹಾಕುವುದು ತಪ್ಪು. ಈಗಾಗಲೇ ಹೇಳಿದಂತೆ ಪ್ರತಿದಿನದ ಮರಣದರ ಏರುಪೇರಾಗುತ್ತಿರುತ್ತದೆ. ಅದರ ನಿಖರ ದಿಕ್ಕನ್ನು ಪತ್ತೆಹಚ್ಚಲು ಪ್ರತಿದಿನದ ಮರಣದರವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಹಾಗು ಅದಕ್ಕೆ ಹಿಂದಿನ 21 ದಿನಗಳ ಸೋಂಕಿತರ ಸರಾಸರಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೇ ವಿನಾ ಒಟ್ಟಾರೆ ಸೋಂಕಿತರ ಸಂಖ್ಯೆಯನ್ನಲ್ಲ.

 ಅದನ್ನೇ ಭಾರತಕ್ಕೆ ಅನ್ವಯಿಸುವುದಾದರೆ ಜೂನ್ 5ರಂದು ಭಾರತದಲ್ಲಿ ಕೋವಿಡ್ ಮರಣದ ಸಂಖ್ಯೆ 286.  ಜೂನ್ 5ಕ್ಕೆ 21 ದಿನಗಳ ಮುಂಚೆ ಅಂದರೆ ಮೇ 15ಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ 85,784. ಅಂದರೆ ಮೇ 15- ಜೂನ್ 5 ರ ನಡುವಿನ ಈ 21 ದಿನಗಳ ಅವಧಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,36,657-85784= 1,50,873. ಇದನ್ನು 21ರಿಂದ ಭಾಗಿಸಿದರೆ ನಮಗೆ ಜೂನ್ 5 ಕ್ಕೆ ಮುಂಚಿನ 21 ದಿನಗಳ ಸರಾಸರಿ ಸಿಗುತ್ತದೆ. 150873/21= 7,184.  ಜೂನ್ 5ರಂದು ಸಂಭವಿಸಿದ ಕೋವಿಡ್  ಸಾವುಗಳ ಸಂಖ್ಯೆಯನ್ನು ಈ ಸರಾಸರಿಯಿಂದ ಭಾಗಿಸಿದರೆ ನೈಜ ಕೋವಿಡ್  ಮರಣ ದರ ದೊರೆಯುತ್ತದೆ. ಅಂದರೆ 286/7184x100= 3.9 .

ಹೀಗಾಗಿ ವಾಸ್ತವದಲ್ಲಿ ಭಾರತದಲ್ಲಿ ಕೋವಿಡ್ ಮರಣದರ 3.9, ಸರ್ಕಾರ ಕೊಚ್ಚಿಕೊಳ್ಳುತ್ತಿರುವಂತೆ 2.8 ಅಲ್ಲ. ಇದು ಇತರ ದೇಶಗಳಿಗೆ ಹೋಲಿಸಿದಲ್ಲಿ ಕಡಿಮೆಯಲ್ಲ. ಹೆಚ್ಚು. 

2. ಎರಡನೆಯದಾಗಿ ಅಮೆರಿಕದಂತಹ ಅಮೆರಿಕವು ಸಹ ಕಂಡುಕೊಂಡಿರುವುದೇನೆಂದರೆ ಕೋವಿಡ್ ಸೋಂಕಿತರೆಲ್ಲರೂ ಪತ್ತೆಯಾಗುವುದಿಲ್ಲ. ಹೀಗಾಗಿ ಕೋವಿಡ್ ಸಾವುಗಳ ನಿಜವಾದ ಪ್ರಮಾಣವನ್ನು ಕೇವಲ ನೋಂದಾಯಿತ ಕೋವಿಡ್ ಸೋಂಕಿತರ ಸಾವುಗಳನ್ನು ಮಾತ್ರ ಆಧರಿಸಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಹೀಗಾಗಿ ಅಮೆರಿಕದಲ್ಲಿ ಸಾಧಾರಣ ಸಂದರ್ಭಗಳಲ್ಲಿ ಆ ನಿರ್ದಿಷ್ಟ ತಿಂಗಳುಗಳಲ್ಲಿ ದಾಖಲಾಗುತ್ತಿದ್ದ  ಸರಾಸರಿ ಸಾವುಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿರುವ ಸಾವುಗಳನ್ನೂ ಸಹ ಸಂಭಾವ್ಯ ಕೋವಿಡ್ ಸಾವುಗಳೆಂದು ಲೆಕ್ಕಾಹಾಕುತ್ತಾರೆ.

 (https://www.worldometers.info/coronavirus/coronavirus-death-rate/)

ಹೋಲಿಸಿ ನೋಡಿದಲ್ಲಿ ಹುಟ್ಟು-ಸಾವುಗಳ ದಾಖಲೆಯ ವಿಷಯದಲ್ಲಿ ಭಾರತ ಅಮೆರಿಕಕ್ಕಿಂತ ಬಹಳಷ್ಟು ಹಿಂದು... 2000ನೇ ಇಸವಿಯ ಹೊತ್ತಿಗೂ ಭಾರತದಲ್ಲಿ ಶೇ.40-50 ರಷ್ಟು ಹುಟ್ಟು-ಸಾವುಗಳು ದಾಖಲಾಗುತ್ತಿರಲಿಲ್ಲ. ಅದಿರಲಿ.  ಜನವರಿ-ಜೂನ್ ತಿಂಗಳುಗಳಲ್ಲಿ ಸರಾಸರಿ ಸಾವುಗಳಿಗಿಂತ ಹೆಚ್ಚುವರಿಯಾಗಿ ದಾಖಲಾಗಿರುವ ಸಾವುಗಳನ್ನೂ ಕೋವಿಡ್ ಸಾವಿನ ಪಟ್ಟಿಯಲ್ಲಿ ಸರ್ಕಾರ ಔಪಚಾರಿಕವಾಗಿಯೂ  ಸೇರಿಸಿಕೊಳ್ಳುತ್ತಿಲ್ಲ. ಈ ಕಾರಣದಿಂದಾಗಿಯೂ  ಭಾರತದಲ್ಲಿ  ಕೋವಿಡ್ ಮರಣದರ ಸರ್ಕಾರದ ಹೇಳಿಕೆಗಳಿಗಿಂತಲೂ ಸಾಕಷ್ಟು ಹೆಚ್ಚಿರುತ್ತದೆ.

3. ಮೂರನೆಯದಾಗಿ ಮೋದಿ ಸರ್ಕಾರವು ಜಾಗತಿಕ ಮಟ್ಟದಲ್ಲಿ ಪ್ರತಿಷ್ಟೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಆಧಾರವಿಲ್ಲದ ಅಂಕಿಸಂಖ್ಯೆಗಳನ್ನು ಘೋಷಿಸುವ ಪರಿಪಾಠವನ್ನು ಕೋವಿಡ್ ಸಂದರ್ಭದಲ್ಲೂ ಮುಂದುವರಿಸಿದೆ.

 ಅದಕ್ಕೆ ಇತ್ತೀಚಿನ ಉದಾಹರಣೆ ಕೋವಿಡ್ ಪ್ಯಾಕೇಜ್. ವಾಸ್ತವದಲ್ಲಿ ಪ್ಯಾಕೇಜಿನ ಭಾಗವಾಗಿ ಜನರಿಗೆ ವರ್ಗಾವಣೆ ಆಗುತ್ತಿರುವುದು ಜಿಡಿಪಿಯ ಕೇವಲ ಶೇ. 0.38ರಷ್ಟು ಮಾತ್ರ . ಆದರೂ  ಕೋವಿಡ್ ಪರಿಹಾರದ ವಿಷಯಗಳಲ್ಲಿ ಜಾಗತಿಕ  ಮಟ್ಟದಲ್ಲಿ ಪ್ರತಿಷ್ಟೆ  ಕಾಪಾಡಿಕೊಳ್ಳುವ ಸಲುವಾಗಿ  ಜಿಡಿಪಿಯ ಶೇ.10ರಷ್ಟು ಪ್ಯಾಕೇಜು ನೀಡಲಾಗಿದೆಯೆಂದು ಸರ್ಕಾರ ಘೋಷಿಸಿದೆ. ಆದರೆ ಜಾಗತಿಕ ರೇಟಿಂಗ್ ಏಜೆನ್ಸಿಗಳಾದ Berkleys ಮತ್ತು Bernstein ಸಂಸ್ಥೆಗಳು ಸರ್ಕಾರದ ಈ ಸುಳ್ಳುಗಳನ್ನು ಬಹಿರಂಗವಾಗಿಯೇ ಟೀಕಿಸಿವೆ .

ಕೋವಿಡ್ ಮರಣದರದ ಘೋಷಣೆಯಲ್ಲೂ ಸರ್ಕಾರ ಈ ಸುಳ್ಳು ಪ್ರತಿಷ್ಟೆಯನ್ನೇ ಮೆರೆಯುತ್ತಿರುವಂತೆ ಕಾಣುತ್ತಿದೆ.

ಅದರಲ್ಲೂ ಬಿಜೆಪಿ ಆಡಳಿತ ರಾಜ್ಯಗಳಾದ ಗುಜರಾತ್ , ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು, ಅದರಲ್ಲೂ ವಿಶೆಷವಾಗಿ ಗುಜರಾತ್ ಸರ್ಕಾರವು ಕೋವಿಡ್ ಸೋಂಕಿನ ಹಾಗೂ ಸಾವುಗಳನ್ನು ದಾಖಲಿಸುವಲ್ಲಿ ಪಾರದರ್ಶಕವಾಗಿಲ್ಲವೆಂದು  ಸ್ವತಂತ್ರ ಪತ್ರಿಕಾ ವರದಿಗಳು ಸ್ಪಷ್ಟಪಡಿಸುತ್ತಿವೆ. ಪ. ಬಂಗಾಳದ ಸಾವು ಹಾಗೂ ಸೋಂಕಿನ ದರಗಳ ವರದಿ ಪ್ರಾಮಾಣಿಕವಾಗಿಲ್ಲವೆಂದು ಕೇಂದ್ರ ಸರ್ಕಾರವೇ ಹಲವಾರು ಸಾರಿ ಆರೋಪಿಸಿದೆ.

4. ನಾಲ್ಕನೆಯದಾಗಿ, ಕೋವಿಡ್ ಸಾವುಗಳ ಸಂಖ್ಯೆಯು ಕೋವಿಡ್ ಸೋಂಕಿತರ ಸಂಖ್ಯೆಯನ್ನು ಆಧರಿಸಿರುತ್ತದೆ. ಆದರೆ ಭಾರತದಲ್ಲಿ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವುದಕ್ಕಾಗಿ ನಡೆಸುತ್ತಿರುವ ಪರೀಕ್ಷೆಗಳೇ ತುಂಬಾ ಕಡಿಮೆ. ವಾಸ್ತವದಲ್ಲಿ ಕೋವಿಡ್  ಸೋಂಕಿತರ ಮೊದಲನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 65,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.  ಮೂರನೇ ಸ್ಥಾನದಲ್ಲಿರುವ ರಶ್ಯದಲ್ಲಿ 82,599 ಪರೀಕ್ಷೆಗಳೂ, ನಾಲ್ಕನೇ ಸ್ಥಾನದಲ್ಲಿರುವ ಸ್ಪೇನಿನಲ್ಲಿ 86,900 ಪರೀಕ್ಷೆಗಳೂ, ಐದನೇ ಸ್ಥಾನದಲ್ಲಿರುವ ಬ್ರಿಟನ್ನಿನಲ್ಲಿ 76,837 ಪರೀಕ್ಷೆಗಳೂ ನಡೆಸಲಾಗುತ್ತದೆ. ಈಗ ನಮಗಿಂತ ಕಡಿಮೆ ಸೋಂಕಿತರನ್ನು ಹೊಂದಿರುವ ಇಟಲಿಯಲ್ಲೂ 68,046 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಇವುಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಪ್ರತಿ ಹತ್ತುಲಕ್ಷ ಜನರಿಗೆ ಕೇವಲ 3,281 ಪರೀಕ್ಷೆಗಳನ್ನೂ ಮಾತ್ರ ಮಾಡಲಾಗುತ್ತಿದೆ. ಅಂದರೆ ನಮಗಿಂತ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳ ಶೇ. 5-10 ಭಾಗದಷು ಪರೀಕ್ಷೆಗಳನ್ನು ಭಾರತದಲ್ಲಿ ನಡೆಸಲಾಗುತ್ತಿಲ್ಲ.

ಹೀಗಾಗಿ ಭಾರತದಲ್ಲಿ ಅಷ್ಟೇ ಪ್ರಮಾಣದ ಪರೀಕ್ಷೆಗಳು ನಡೆದದಲ್ಲಿ ಸೋಂಕಿತರ ಸಂಖ್ಯೆಯಲ್ಲೂ ಹಾಗೂ ಅದೇ ಕಾರಣದಿಂದಾಗಿ ಕೋವಿಡ್ ಮರಣದ ಸಂಖ್ಯೆಯಲ್ಲೂ ಹತ್ತು ಪಟ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಭಾರತದಲ್ಲಿ ಕೋವಿಡ್ ಮರಣಗಳ ಸಂಖ್ಯೆ ಕಡಿಮೆ ಎಂದು ಬೆನ್ನು ತಟ್ಟಿಕೊಳ್ಳುವುದಕ್ಕೆ ಯಾವುದೇ ಸಮರ್ಥನೆ ಇಲ್ಲ.

ಅಲ್ಲವೇ?

- ಶಿವಸುಂದರ್

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News