ಕ್ವಾರಂಟೈನ್ ನಿಯಮ ಹಿನ್ನೆಲೆ: ಮೊದಲ ಟೆಸ್ಟ್ ಗೆ ರೂಟ್ ಅಲಭ್ಯ?

Update: 2020-06-07 06:22 GMT

ಹೊಸದಿಲ್ಲಿ: ಇಂಗ್ಲೆಂಡ್ ನಾಯಕ ಜೋ ರೂಟ್ ವೈಯಕ್ತಿಕ ಕಾರಣದಿಂದ ಏಳು ದಿನಗಳ ಕಾಲ ಸ್ವಯಂ ಪ್ರತ್ಯೇಕತೆ ಕಾಯ್ದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಮುಂದಿನ ತಿಂಗಳ ನಿಗದಿಯಾಗಿರುವ ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನವಾಗಿದೆ.

ಜುಲೈ 8ರಂದು ಏಗಾಸ್ ಬೌಲ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುವುದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ಸಿಗಲಿದೆ. ಇದೇ ಸಮಯದಲ್ಲಿ ರೂಟ್ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ. ತನ್ನ ಮಗುವನ್ನು ನೋಡಲು ಹೋಗಲಿರುವ ರೂಟ್ 7 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಗಿರುವುದು ಅನಿವಾರ್ಯವಾಗಿದೆ ಎಂದು‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಮಾರ್ಗಸೂಚಿಗಳ ಅನ್ವಯ ರಾಷ್ಟ್ರೀಯ ತಂಡವನ್ನು ಮತ್ತೆ ಸೇರಿಕೊಳ್ಳುವ ಮೊದಲು ಸೆಲ್ಫ್ ಐಸೋಲೇಟ್ ಆಗಬೇಕಾಗಿದೆ. ಇಸಿಬಿ ತನ್ನ ಮಾರ್ಗಸೂಚಿಗಳನ್ನು ನಿರಂತರವಾಗಿ ಪರಾಮರ್ಶಿಸುತ್ತಿದ್ದು, ಮುಂದಿನ ತಿಂಗಳು ಸೆಲ್ಫ್ ಐಸೋಲೇಶನ್ ನಿಯಮವನ್ನು ಸಡಿಲಿಸುವ ಸಾಧ್ಯತೆಯೂ ಇದೆ.

ಕೋವಿಡ್-19 ಭಯದ ವಿರುದ್ಧ ಹೋರಾಡಲು ಟೆಸ್ಟ್ ಸರಣಿಯು ಜೈವಿಕ ಭದ್ರತೆಯ ವಾತಾವರಣದಲ್ಲಿ ನಡೆಯಲಿದೆ. ಇದಕ್ಕೆ ಇಂಗ್ಲೆಂಡ್ ಸರಕಾರದ ಅಂತಿಮ ಅನುಮತಿ ಲಭಿಸಿದೆ. ಕೊರೋನ ವೈರಸ್‌ನಿಂದಾಗಿ ವಿಶ್ವದಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾದ ಬಳಿಕ ನಡೆಯುತ್ತಿರುವ ಮೊದಲ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದೆ.

ಮೊದಲ ಟೆಸ್ಟ್ ಜುಲೈ 8ರಿಂದ 12ರ ತನಕ ನಡೆಯಲಿದ್ದು, ಉಳಿದೆರಡು ಪಂದ್ಯಗಳು ಓಲ್ಡ್ ಟ್ರಾಫೋರ್ಡ್‌ನಲ್ಲಿ ಜುಲೈ 16ರಿಂದ 20 ಹಾಗೂ ಜು.24ರಿಂದ 28ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News