Breaking News: ನಟ ಚಿರಂಜೀವಿ ಸರ್ಜಾ ನಿಧನ
ಬೆಂಗಳೂರು, ಜೂ.7: ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ(39) ಹೃದಯಾಘಾತದಿಂದ ರವಿವಾರ ನಿಧನರಾಗಿದ್ದಾರೆ.
ನಿನ್ನೆ(ಜೂ.6) ರಾತ್ರಿಯಿಂದ ಎದೆನೋವಿನಿಂದ ಬಳಲುತ್ತಿದ್ದ ಅವರು, ಇಂದು ಮಧ್ಯಾಹ್ನ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಕೊನೆ ಉಸಿರೆಳೆದಿದ್ದಾರೆ. ಅವರು ಪತ್ನಿ ಮೇಘನಾ, ಸೋದರ ಮಾವ ಹಿರಿಯ ನಟ ಅರ್ಜುನ್ ಸರ್ಜಾ, ದ್ರುವ ಸರ್ಜಾ ಸೇರಿ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಪರಿಚಯ: 1980ರ ಅ.17ರಂದು ಬೆಂಗಳೂರಿನಲ್ಲಿ ಜನಿಸಿದ ಚಿರಂಜೀವಿ ಸರ್ಜಾ, ಬಾಲ್ಯದ ಶಿಕ್ಷಣವನ್ನು ಬಾಲ್ಡ್ ವಿನ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ಕಾಲೇಜು ಶಿಕ್ಷಣವನ್ನು ವಿಜಯ ಕಾಲೇಜಿನಲ್ಲಿ ಮುಗಿಸಿ, ನಾಲ್ಕು ವರ್ಷಗಳ ಕಾಲ ಅರ್ಜುನ್ ಸರ್ಜಾ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದರು. ನಂತರ 2009ರಲ್ಲಿ ವಾಯುಪತ್ರ ಸಿನೆಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದರು.
ಚಿರಂಜೀವಿ ಸರ್ಜಾ ವಾಯುಪುತ್ರ, ಗಂಡೆದೆ, ದಂಡಂದಶಗುಣಂ, ಚಿರು, ಚಂದ್ರಲೇಖ, ವರದನಾಯಕ, ಅಜಿತ್, ರುದ್ರತಾಂಡವ, ರಾಮ್‍ಲೀಲಾ, ಆಟಗಾರ, ಆಕೆ, ಭರ್ಜರಿ, ಸಂಹಾರ, ಅಮ್ಮ ಐ ಲವ್ಯು ಸೇರಿದಂತೆ ಒಟ್ಟು 22ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು.
ಕಂಬಿನಿ ಮಿಡಿದ ಸಿನೆಮಾ ರಂಗ: ನಟ ಚಿರಂಜೀವಿ ಸರ್ಜಾ ನಿಧನಕ್ಕೆ ಸ್ಯಾಂಡಲ್‍ವುಡ್‍ನ ತಾರೆಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಹಿರಿಯ ನಟಿ ತಾರಾ, ಸಂಸದೆ ಸುಮಲತಾ ಅಂಬರೀಶ್, ನಟ ದರ್ಶನ್, ಸುದೀಪ್, ಜಗ್ಗೇಶ್, ನಿಸಾಸಂ ಸತೀಶ್, ನಟಿ ಅಮೂಲ್ಯ ಸೇರಿದಂತೆ ನಿರ್ಮಾಪಕರು, ನಿರ್ದೇಶಕರು ಅವರೊಂದಿಗೆ ಕಳೆದ ಅನುಭವಗಳನ್ನು ಮಾಧ್ಯಮಕ್ಕೆ ಹಂಚಿಕೊಂಡರು.
ಅಪಾರ ಕನಸನ್ನು ಹೊಂದಿದ್ದ ಚಿರಂಜೀವಿ ಸರ್ಜಾ, ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಎಲ್ಲ ಅರ್ಹತೆಯನ್ನು ಹೊಂದಿದ್ದರು. ಹಾಗೂ ಎಲ್ಲರೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದರು. ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹದಾಯಕರಾಗಿದ್ದರು. ಕೇವಲ 39 ವರ್ಷಕ್ಕೆ ಅವರು ನಮ್ಮೊಂದಿಗಿಲ್ಲ ಎಂಬುದನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲವೆಂದು ಚಿತ್ರತಾರೆಯರು ಕಂಬನಿ ಮಿಡಿದಿದ್ದಾರೆ.
ನಾಳೆ ಅಂತ್ಯಕ್ರಿಯೆ
ನಟ ಚಿರಂಜೀವಿ ಸರ್ಜಾರವರ ಅಂತ್ಯಕ್ರಿಯೆಯನ್ನು ಜೂ.8 ಬೆಳಗ್ಗೆ 11ಕ್ಕೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜೆಕ್ಕೇನಹಳ್ಳಿಯಲ್ಲಿರುವ ಅವರ ತಾತ ಶಕ್ತಿಪ್ರಸಾದ್ ಸಮಾದಿಯ ಬಳಿ ನಡೆಸಲಾಗುತ್ತದೆ ಎಂದು ಕುಟುಂಬ ವರ್ಗದವರು ಮಾಹಿತಿ ನೀಡಿದ್ದಾರೆ.