ಆಸ್ಪತ್ರೆ ಸೌಲಭ್ಯ ನಿರಾಕರಣೆ : ಫುಟ್‌ಪಾತ್‌ನಲ್ಲೇ ಹೆತ್ತ ಮಹಿಳೆ !

Update: 2020-06-08 04:06 GMT

ನೋಯ್ಡ : ನೋಯ್ಡ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆ ಆಸ್ಪತ್ರೆ ಹೊರಗೆ ಫುಟ್‌ಪಾತ್‌ನಲ್ಲೇ ಮೃತ ಮಗುವನ್ನು ಹೆತ್ತ ಅಮಾನವೀಯ ಘಟನೆ ವರದಿಯಾಗಿದೆ.

ಎಂಟು ಆಸ್ಪತ್ರೆಗಳಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ಗರ್ಭಿಣಿಯೊಬ್ಬರು ಆರೋಗ್ಯ ಸಂಕೀರ್ಣತೆಯಿಂದ ಮೃತಪಟ್ಟ ಘಟನೆಯ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.

ಪೂನಮ್ (26) ಎಂಬ ಮಹಿಳೆ ಕಂಟೈನ್‌ಮೆಂಟ್ ಪ್ರದೇಶವಾದ ಸದರ್‌ಪುರದವರು. ಗುರುವಾರ ರಾತ್ರಿ 9.30ಕ್ಕೆ ಅವರನ್ನು ಹೆರಿಗೆ ನೋವಿನ ಕಾರಣದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೊದಲು ಮಹಿಳೆಯನ್ನು ಸೂಲಗಿತ್ತಿಯೊಬ್ಬರ ಬಳಿ ಕರೆದೊಯ್ಯಲಾಗಿದೆ ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು ಎಂದು ದಿನಗೂಲಿ ನೌಕರನಾಗಿರುವ ಪತಿ ಶೈಲೇಂದ್ರ ಕುಮಾರ್ ದೂರಿದ್ದಾರೆ.

ಆಸ್ಪತ್ರೆಯಲ್ಲಿ ಪತ್ನಿಯ ತಪಾಸಣೆ ನಡೆಸಿ, ಸೂಲಗಿತ್ತಿ ಬಳಿ ಏಕೆ ಹೋಗಿದ್ದೀರಿ ಎಂದು ಪ್ರಶ್ನಿಸಿದರು. ಬಳಿಕ ಕೆಲ ಪತ್ರಗಳಿಗೆ ನನ್ನಿಂದ ಸಹಿ ಮಾಡಿಸಿಕೊಂಡು, ಜಿಐಎಂಎಸ್ (ಕೋವಿಡ್ ಚಿಕಿತ್ಸಾ ಕೇಂದ್ರ) ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು ಎಂದು ವಿವರಿಸಿದ್ದಾರೆ.

ಮಹಿಳೆ ಹೆರಿಗೆ ನೋವಿನಿಂದ ಚೀರಾಡುತ್ತಿದ್ದರೂ, ಆಟೊ ರಿಕ್ಷಾದಲ್ಲಿ ಬಂದಿದ್ದ ಈ ಕುಟುಂಬ ಆ್ಯಂಬುಲೆನ್ಸ್ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಇದಾದ ಕೆಲ ನಿಮಿಷಗಳಲ್ಲಿ ಮುಖ್ಯ ದ್ವಾರದ ಹೊರಗೆ ಫುಟ್‌ಪಾತ್‌ನಲ್ಲಿ ಮೃತ ಮಗುವನ್ನು ಆಕೆ ಹೆತ್ತರು. ಮಹಿಳೆಗೆ ಸಕಾಲಿಕ ಚಿಕಿತ್ಸೆ ದೊರಕಿದ್ದರೆ ಮಗು ಬದುಕಿರುತ್ತಿತ್ತು. ಮೊದಲು ನಾವು ಸೂಲಗಿತ್ತಿಯ ಬಳಿಗೆ ಕರೆದೊಯ್ದದ್ದು ನಿಜ; ಆದರೆ ಹೆರಿಗೆ ನೋವು ಆರಂಭವಾದ ತಕ್ಷಣ ಆಸ್ಪತ್ರೆಗೆ ಕರೆ ತಂದೆವು ಎಂದು ಪೂನಂ ಸಹೋದರ ಬಬ್ಲೂ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News