×
Ad

ಯಶವಂತರಪುರ: ಪೌರ ಕಾರ್ಮಿಕರಿಗೆ 'ಸುವಿಧಾ ಕ್ಯಾಬಿನ್' ಉದ್ಘಾಟನೆ

Update: 2020-06-08 17:27 IST

ಬೆಂಗಳೂರು, ಜೂ. 8: ನಗರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅವರ ಅನುಕೂಲಕ್ಕಾಗಿ ಯಶವಂತರಪುರದ ಆರ್‍ಟಿಓ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ `ಸುವಿಧಾ ಕ್ಯಾಬಿನ್' ಅನ್ನು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಉದ್ಘಾಟಿಸಿದರು.

ಸೋಮವಾರ ಇಲ್ಲಿನ ಯಶವಂತಪುರ ಆರ್‍ಟಿಓ ಕಚೇರಿ ಆವರಣದಲ್ಲಿ ಸುವಿಧಾ ಕ್ಯಾಬಿನ್ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ನೈರ್ಮಲ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರ ಸುರಕ್ಷತೆ ನಮ್ಮೆಲ್ಲರ ಕರ್ತವ್ಯ. ಬೆಳಗ್ಗೆ 5ಗಂಟೆಗೆ ಕೆಲಸ ಆರಂಭಿಸುವ ಪೌರ ಕಾರ್ಮಿಕರು ತಮ್ಮ ವಸ್ತುಗಳನ್ನು ಇರಿಸಿಕೊಳ್ಳಲು ಸುವಿಧಾ ಕ್ಯಾಬಿನ್ ಸಹಕಾರಿಯಾಗಲಿದೆ ಎಂದರು.

ಸುವಿಧಾ ಕ್ಯಾಬಿನ್‍ನಲ್ಲಿ ಪೌರ ಕಾರ್ಮಿಕರು ತಮ್ಮ ವಸ್ತುಗಳನ್ನು ಇರಿಸಿಕೊಳ್ಳುವುದರ ಜೊತೆಗೆ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದರಿಂದ ಪೌರ ಕಾರ್ಮಿಕರಿಗೆ ಪ್ರಯೋಜನ ಆಗಲಿದೆ. ಎಲ್ಲ ಪೌರ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಅಶ್ವಥ್ ನಾರಾಯಣ ಇದೇ  ವೇಳೆ ಆಶಯ ವ್ಯಕ್ತಪಡಿಸಿದರು.

ಪ್ರಾಯೋಗಿಕ ಯೋಜನೆ: ಪೌರ ಕಾರ್ಮಿಕರ ಅನುಕೂಲಕ್ಕಾಗಿ ವಾರ್ಡ್‍ಗಳಲ್ಲಿ ಮಾಸ್ಟರಿಂಗ್ ಕೇಂದ್ರಗಳ ಬಳಿ ಕಂಟೈನರ್‍ನಿಂದ ಕ್ಯಾಬಿನ್ ನಿರ್ಮಿಸಿ ಪ್ರಾಯೋಗಿಕವಾಗಿ ಬೆಂಗಳೂರಿನ ಎರಡು ಕಡೆಗಳಲ್ಲಿ 'ಸುವಿಧಾ ಕ್ಯಾಬಿನ್' ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಗರದ 198 ವಾರ್ಡ್‍ಗಳಲ್ಲಿಯೂ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಕ್ಯಾಬಿನ್‍ನಲ್ಲಿ ಏನೇನಿದೆ: 'ಸುವಿಧಾ ಕ್ಯಾಬಿನ್'ನಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಬಟ್ಟೆ ಬದಲಿಸುವ ಕೊಠಡಿ, ಹಸುಗೂಸಿಗೆ ಹಾಲುಣಿಸಲು ಸ್ಥಳಾವಕಾಶ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಪಾಟು, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಸೇರಿದಂತೆ ಪಾಲಿಕೆ ಸ್ಥಳೀಯ ಸದಸ್ಯರು, ಹಿರಿಯ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News