ಕಾಡುಗೊಲ್ಲರ ಸಮುದಾಯದ ಸತೀಶ್ ಸಾಸಲು ಅವರಿಗೆ ಮೇಲ್ಮನೆ ಸ್ಥಾನ ನೀಡಲು ಆಗ್ರಹ
ಬೆಂಗಳೂರು, ಜೂ. 8: ಅತ್ಯಂತ ಹಿಂದುಳಿದ ಕಾಡುಗೊಲ್ಲರ ಸಮುದಾಯದ ಯುವ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಸತೀಶ್ ಸಾಸಲು ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಕಾಡುಗೊಲ್ಲರ ಸಮುದಾಯ ಮುಖಂಡರು ಆಗ್ರಹಿಸಿದ್ದಾರೆ.
ಅವಧಿ ಮುಗಿಯುತ್ತಿರುವ ಕಾಡುಗೊಲ್ಲರ ಸಮುದಾಯದ ಮೇಲ್ಮನೆ ಸದಸ್ಯೆ ಜಯಮ್ಮ ಬಾಲರಾಜ್ ಅವರ ಸ್ಥಾನಕ್ಕೆ ಯುವ ನಾಯಕ ಸತೀಶ್ ಸಾಸಲು ಅವರಿಗೆ ಸ್ಥಾನವನ್ನು ನೀಡುವ ಮೂಲಕ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸಬೇಕು. ಇದರಿಂದ ಸಮುದಾಯದ ಏಳ್ಗೆಗೆ ಸಹಕಾರಿಯಾಗಲಿದೆ ಎಂದು ಸಮುದಾಯದ ಮುಖಂಡ ಜಿ.ಕೆ.ನಾಗಣ್ಣ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.
ಶೋಷಿತ ಸಮುದಾಯಗಳ ಒಗ್ಗಟ್ಟು, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ಪಕ್ಷ ಸಂಘಟನೆಗೆ ಕಟಿಬದ್ಧರಾಗಿರುವ, ಬದ್ಧತೆಯುಳ್ಳ ಯುವ ನಾಯಕ ಸತೀಶ್ ಸಾಸಲು ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಪಕ್ಷಕ್ಕೆ ಚೈತನ್ಯ ತಂದುಕೊಟ್ಟಿದ್ದರು. ಕೊನೆಯ ಕ್ಷಣದಲ್ಲಿ ಅವರಿಗೆ ಟಿಕೆಟ್ ಕೈತಪ್ಪಿತು ಎಂದು ನಾಗಣ್ಣ ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಡುಗೊಲ್ಲರ ಸಮುದಾಯ ಬಹಳ ಹಿಂದನಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಪಕ್ಷ ಸಂಘಟನೆ ಮತ್ತು ಸಮುದಾಯದ ಉನ್ನತ್ತಿ ದೃಷ್ಟಿಯಿಂದ ಕಾಡುಗೊಲ್ಲರ ಸಮುದಾಯ ಯುವ ಮುಖಂಡ ಸತೀಶ್ ಸಾಸಲು ಅವರಿಗೆ ಮೇಲ್ಮನೆ ಸ್ಥಾನ ನೀಡಬೇಕು ಎಂದು ನಾಗಣ್ಣ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಕಾಡುಗೊಲ್ಲರ ಯುವಸೇನೆ ರಾಜ್ಯಾಧ್ಯಕ್ಷ ಜಿ.ವಿ.ರಮೇಶ್, ರಾಜಣ್ಣ, ಗೋವಿಂದರಾಜು, ಲಿಂಗಯ್ಯ, ಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.