×
Ad

ಮೋದಿ ಸರಕಾರದ ವೈಫಲ್ಯಗಳ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಖರ್ಗೆಯನ್ನು ಬಿಜೆಪಿಯವರು ಸೋಲಿಸಿದರು: ಸಿದ್ದರಾಮಯ್ಯ

Update: 2020-06-08 18:42 IST

ಬೆಂಗಳೂರು, ಜೂ.8: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ನಮ್ಮ ಪಕ್ಷದಿಂದ ಎರಡನೆ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ವಿಚಾರದ ಕುರಿತು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ನಾವು ತಲೆ ಹಾಕುವುದಿಲ್ಲ ಎಂದರು.

ಹಿರಿಯ ನಾಯಕರು ರಾಜ್ಯಸಭೆಯಲ್ಲಿರಬೇಕು. ಬಿಜೆಪಿಯನ್ನು ಎದುರಿಸುವ ಶಕ್ತಿ ಅವರಿಗಿದೆ. ಪಕ್ಷಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಸಲ್ಲಿಸಿರುವ ಸೇವೆಯನ್ನು ಮನಗಂಡು ಅವರನ್ನು ಸೋನಿಯಾಗಾಂಧಿ ಆಯ್ಕೆ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಮೊದಲನೆ ಅವಧಿಯ ಸರಕಾರದ ವೈಫಲ್ಯಗಳನ್ನು ಖರ್ಗೆ ಬಯಲಿಗೆಳೆದಿದ್ದರು. ಲೋಕಸಭೆಯಲ್ಲಿ ಧ್ವನಿ ಎತ್ತಿದ್ದರು. ಆದುದರಿಂದ, ಬಿಜೆಪಿಯವರೆಲ್ಲ ಸೇರಿ ಅವರನ್ನು ಸೋಲಿಸಿದರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸತತ 11 ಚುನಾವಣೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿದ್ದರು. ಪಕ್ಷಕ್ಕೆ ಅವರ ಕೊಡುಗೆ ಅಪಾರವಾದದ್ದು. ನಾವು ಖರ್ಗೆ ಅವರ ಹೆಸರನ್ನು ಮಾತ್ರ ಶಿಫಾರಸ್ಸು ಮಾಡಿದ್ದೆವು. ನಮ್ಮ ಮಾತನ್ನು ಪರಿಗಣಿಸಿ ಹೈಕಮಾಂಡ್ ಅವರನ್ನು ಆಯ್ಕೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News