ಪರಪ್ಪನ ಅಗ್ರಹಾರದಲ್ಲಿ ಹೊಸ ಕೈದಿಗಳಿಗೆ 21 ದಿನ ಕ್ವಾರಂಟೈನ್

Update: 2020-06-08 15:07 GMT

ಬೆಂಗಳೂರು, ಜೂ.8: ಕೊರೋನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಬಂಧಿಗಳು ಹಾಗೂ ಸಿಬ್ಬಂದಿಯಲ್ಲೂ ಆತಂಕ ಕಾಡುತ್ತಿದೆ. ಹೀಗಾಗಿ, ಹೊಸದಾಗಿ ಯಾರೇ ಬಂಧಿಗಳು ಕಾರಾಗೃಹಕ್ಕೆ ಬಂದರೂ ಅವರನ್ನು 21 ದಿನ ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತಿದೆ.

ಗಂಭೀರ ಅಪರಾಧ ಪ್ರಕರಣಗಳ ವಿಚಾರಣಾಧೀನ ಬಂದಿಗಳು ಹಾಗೂ ಸಜಾ ಬಂಧಿಗಳಿಗಾಗಿಯೇ ಕಾರಾಗೃಹದ ಆವರಣದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಅದು ಬಳಕೆಗೆ ಮುಕ್ತವಾಗಿರಲಿಲ್ಲ. ಈಗ ಅದೇ ಕಟ್ಟಡವನ್ನೇ ಕ್ವಾರಂಟೈನ್‍ಗೆ ಬಳಸಿಕೊಳ್ಳಲಾಗುತ್ತಿದ್ದು, ಕಟ್ಟಡದ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

3,500 ಬಂಧಿಗಳ ಸಾಮರ್ಥ್ಯದ ಜೈಲಿನಲ್ಲಿ 5 ಸಾವಿರಕ್ಕೂ ಹೆಚ್ಚು ಬಂಧಿಗಳು ಇದ್ದಾರೆ. ಎಲ್ಲರಿಗೂ ಮೂಲಸೌಕರ್ಯಗಳನ್ನು ಒದಗಿಸುವುದು ಕಷ್ಟವಾಗಿದೆ. ಹೀಗಾಗಿ, 500 ಬಂದಿಗಳ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಿಸಲಾಗಿದೆ. ಇದರ ಉದ್ಘಾಟನೆ ಬಾಕಿ ಇತ್ತು. ಕೊರೋನ ಭೀತಿ ಶುರುವಾಗಿದ್ದರಿಂದ ಇದೇ ಕಟ್ಟಡವನ್ನೇ ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಲಾಗಿದೆ.

ಕೊರೋನ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಾರಾಗೃಹ ಹಾಗೂ ಸುಧಾರಣಾ ಸೇವೆ ಡಿಜಿಪಿ ಅಲೋಕ್ ಮೋಹನ್ ಅವರು ಮಾರ್ಚ್‍ನಲ್ಲೇ ಸುತ್ತೋಲೆ ಹೊರಡಿಸಿದ್ದರು. ಅದರ ಪ್ರಕಾರವೇ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾರಾಗೃಹದ ಅಧೀಕ್ಷಕ ವಿ. ಶೇಷಮೂರ್ತಿ ಹೇಳಿದ್ದಾರೆ.

ಹೊಸ ಕಟ್ಟಡದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಹೊಸದಾಗಿ ಜೈಲಿಗೆ ಬರುವ ವಿಚಾರಣಾಧೀನ ಹಾಗೂ ಸಜಾ ಬಂದಿಗಳನ್ನು ಇದೇ ಕಟ್ಟಡದಲ್ಲಿ 21 ದಿನ ಕ್ವಾರಂಟೈನ್ ಮಾಡಲಾಗುತ್ತಿದೆ. ಪೆರೋಲ್ ಮೇಲೆ ಹೊರಗೆ ಹೋಗಿ ವಾಪಸು ಬರುವ ಬಂಧಿಗಳಿಗೂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ ಎಂದರು.

250ಕ್ಕೂ ಹೆಚ್ಚು ಬಂಧಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಅವರನ್ನು ಕೊರೋನ ವೈರಾಣು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸಾಮಾನ್ಯ ಕೈದಿಗಳ ರೀತಿಯಲ್ಲೇ ನಿತ್ಯವೂ ಪೌಷ್ಠಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ. ವರದಿ ನೆಗಟಿವ್ ಬಂದರಷ್ಟೇ ಬಂಧಿಗಳನ್ನು ಸಾಮಾನ್ಯ ಬ್ಯಾರಕ್‍ಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಸಿಬ್ಬಂದಿಗೂ ಪರೀಕ್ಷೆ ಕಡ್ಡಾಯ: ರಜೆ ಮೇಲೆ ಊರಿಗೆ ಹೋಗಿ ಬರುವ ಸಿಬ್ಬಂದಿಗೂ ಕೊರೋನ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ನೆಗಟಿವ್ ವರದಿ ಬಂದರಷ್ಟೇ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಶೇಷಮೂರ್ತಿ ಹೇಳಿದ್ದಾರೆ.

500ಕ್ಕೂ ಹೆಚ್ಚು ಬಂಧಿಗಳಿಗೆ ಪೆರೋಲ್: ಕೇರಳದಲ್ಲಿ ಮೊದಲ ಕೊರೋನ ಪ್ರಕರಣ ಕಾಣಿಸಿಕೊಂಡಾಗಿನಿಂದಲೇ ಕಾರಾಗೃಹದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. 500ಕ್ಕೂ ಹೆಚ್ಚು ಬಂಧಿಗಳನ್ನು ಮೂರು ತಿಂಗಳ ಸಾಮಾನ್ಯ ಪೆರೋಲ್ ನೀಡಿ ಮನೆಗೆ ಕಳುಹಿಸಲಾಗಿದೆ.

ಪೊಲೀಸರಿಂದಲೇ ಪರೀಕ್ಷೆ; ಮೆಚ್ಚುಗೆ: ಅಪರಾಧ ಪ್ರಕರಣಗಳಲ್ಲಿ ಬಂಧಿಸುವ ಆರೋಪಿಗಳನ್ನು ಪೊಲೀಸರೇ ಕೊರೋನ ಪರೀಕ್ಷೆಗೆ ಒಳಪಡಿಸುತ್ತಿರುವುದಕ್ಕೆ ಕಾರಾಗೃಹದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಪೊಲೀಸರೇ ಆರೋಪಿಗಳ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಬಂದವರನ್ನಷ್ಟೇ ಜೈಲಿಗೆ ಕಳುಹಿಸುತ್ತಿರುವುದು ಒಳ್ಳೆಯ ನಡೆ. ಮುಂಜಾಗ್ರತಾ ಕ್ರಮವಾಗಿ ಇಂಥ ಆರೋಪಿಗಳನ್ನೂ 21 ದಿನ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಶೇಷಮೂರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News