​ಜೂ.29ರಂದು ವಿಧಾನ ಪರಿಷತ್ ಚುನಾವಣೆ: ವೇಳಾಪಟ್ಟಿ ಪ್ರಕಟ

Update: 2020-06-09 09:52 GMT

ಬೆಂಗಳೂರು, ಜೂ.9: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂ.29ರಂದು ಚುನಾವಣೆ ನಿಗದಿಗೊಳಿಸಿ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

ಕಾಂಗ್ರೆಸ್ ಸದಸ್ಯರಾದ ನಸೀರ್ ಅಹ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಎನ್.ಎಸ್.ಬೋಸರಾಜು, ಎಚ್.ಎಂ.ರೇವಣ್ಣ, ಜೆಡಿಎಸ್ ಸದಸ್ಯ ಟಿ.ಎ.ಶರವಣ ಹಾಗೂ ಬಿಜೆಪಿ ಸದಸ್ಯ ಡಿ.ಯು.ಮಲ್ಲಿಕಾರ್ಜುನ ಅವರ ಸದಸ್ಯತ್ವ ಅವಧಿಯು ಜೂ.30ರಂದು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಘೋಷಿಸಲಾಗಿದೆ.

ಚುನಾವಣಾ ಅಧಿಸೂಚನೆಯು ಜೂ.11ರಂದು ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜೂ.18ರಂದು ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಜೂ.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.22ರಂದು ನಾಮಪತ್ರಗಳನ್ನು ಹಿಂಪಡೆಯಲು ಅಂತಿಮ ದಿನವಾಗಿದೆ. ಜೂ.29ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯ ಬಳಿಕ ಮತಗಳ ಎಣಿಕೆ ಕಾರ್ಯ ಆರಂಭವಾಗಿ, ಅಂದೆ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News