‘ಕಲ್ಯಾಣ ಕರ್ನಾಟಕ’ದ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲು: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-06-09 09:59 GMT

ಬೆಂಗಳೂರು, ಜೂ.9: ‘ಕೇವಲ ಹೆಸರಿನಿಂದ ಕಲ್ಯಾಣ ಕರ್ನಾಟಕ ಎಂದು ಕರೆದರೆ ಸಾಲದು, ಈ ಪ್ರದೇಶದ ಆರು ಜಿಲ್ಲೆಗಳ ನಿಜವಾದ ಅಭಿವೃದ್ಧಿ ಸಾಧಿಸುವ ಮೂಲಕ ಕಲ್ಯಾಣದ ಪರಿಕಲ್ಪನೆ ನಿಜವಾದ ಅರ್ಥದಲ್ಲಿ ಸಾಕಾರಗೊಳ್ಳಬೇಕು ಎನ್ನುವುದು ನಮ್ಮ ಸರಕಾರದ ಆಶಯ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಕಲಬುರಗಿ ವಿಭಾಗವನ್ನು ವಿಡಿಯೋ ಮುಖಾಂತರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 2020ರ ಫೆಬ್ರವರಿ 10ರಂದು ಹೈದರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಮ್ಮ ಸರಕಾರ ಘೋಷಿಸಿತು. ಈ ಭಾಗದ ಜನರಲ್ಲಿ ಕೌಶಲ್ಯ ಸುಧಾರಿಸಿ ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಪರಿಣಾಮಕಾರಿ ಬೆಳವಣಿಗೆ ಸಾಧಿಸುವುದು, ಕಲ್ಯಾಣ ಕರ್ನಾಟಕ ಪ್ರಾಂತ್ಯದ ಅಭಿವೃದ್ಧಿಗೆ ಹೊಸ ಆಯಾಮ ನೀಡುವುದು ನಮ್ಮ ಸರಕಾರದ ಗುರಿ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಂಘವು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

500 ಕೋಟಿ ರೂ. ಮೀಸಲು: ಕೃಷಿ, ಆರೋಗ್ಯ, ಶಿಕ್ಷಣ, ಸ್ವಯಂ ಉದ್ಯೋಗ, ಗ್ರಾಮ ಸಬಲೀಕರಣ, ಯುವ ಜನ ಹಾಗೂ ಮಹಿಳಾ ಸಬಲೀಕರಣ ಮತ್ತು ನೈತಿಕ ತತ್ವಗಳನ್ನು ಸಾಧಿಸಿ, ಕಲ್ಯಾಣ ಕರ್ನಾಟಕದ ಜನರ ಬದುಕಿನಲ್ಲಿ ಹೊಸ ಶಕೆಯೊಂದು ಪ್ರಾರಂಭವಾಗಲಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 500 ಕೋಟಿ ರೂ. ಗಳನ್ನು ಆಯವ್ಯಯದಲ್ಲಿ ತೆಗೆದಿರಿಸಿದೆ ಎಂದು ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಧುರೀಣರು, ಮಾಜಿ ಸಂಸದ ಡಾ.ಬಸವರಾಜ ಪಾಟೀಲ ಸೇಡಂ ಕ್ರಾಂತಿಕಾರಕ ಬದಲಾವಣೆಗೆ ಮುನ್ನಡಿ ಬರೆಯಲು ಸಮರ್ಥರಿದ್ದಾರೆ. ಯಾವುದೇ ಅಭಿವೃದ್ಧಿ ಜನಕೇಂದ್ರಿತವಾಗಿರಬೇಕು ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಮತ್ತು ಸ್ಥಳೀಯ ಕೌಶ್ಯಲವನ್ನು ಆಧರಿಸಿ ಉತ್ಪಾದನೆ ಮತ್ತು ಸೇವೆಯನ್ನು ಒದಗಿಸಿಕೊಳ್ಳಬೇಕು.
ಸ್ವಾಲಂಬನೆಯ ಹಾದಿಯಲ್ಲಿ ಪ್ರಧಾನಿ ಮೋದಿಯವರು ಘೋಷಿಸಿರುವ ಆತ್ಮ ನಿರ್ಭರ್ ಭಾರತ್ ಅಭಿಯಾನ ಅತ್ಯಂತ ಸೂಕ್ತವಾದುದಾಗಿದೆ. ಸ್ಥಳೀಯ ಅಸ್ಮಿತೆ ಕಾಪಾಡಿಕೊಂಡು ಜಾಗತಿಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಸುಸಂದರ್ಭವನ್ನು ಕೊರೋನೋತ್ತರ ಬೆಳವಣಿಗೆಗಳು ಒದಗಿಸಿ ಕೊಟ್ಟಿವೆ ಎಂದು ಅವರು ನುಡಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಈ ದಿಸೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವುದು ನನ್ನ ನಂಬಿಕೆಯಾಗಿದೆ. ಸಂಘದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ 3 ಸಾವಿರ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾವಯವ ಕೃಷಿ ಕೇಂದ್ರಗಳ ಸ್ಥಾಪನೆ, ವ್ಯಕ್ತಿತ್ವ ವಿಕಸನಕ್ಕಾಗಿ ವಿಚಾರ ಸಂಕಿರಣ, ಸ್ವಯಂ ಉದ್ಯೋಗ ಹಾಗೂ ಕೌಶಲ್ಯ ತರಬೇತಿ, ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಿರುವುದು ಸಕಾಲಿಕ ಎಂದು ಯಡಿಯೂರಪ್ಪ ತಿಳಿಸಿದರು.

ಯುವ ಜನ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆಯಲ್ಲದೆ, ಗ್ರಾಮಗಳ ಸಬಲೀಕರಣಕ್ಕಾಗಿ ಆರ್ಥಿಕ ಉತ್ತೇಜನ ನೀಡುವುದರ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಸಹಕಾರಿ ಎಂದು ನಾನು ಭಾವಿಸಿದ್ದೇನೆ. ಪಾಟೀಲ ಸೇಡಂರವರ ಅಧ್ಯಕ್ಷತೆಯಲ್ಲಿ 15 ಜನರ ಆಡಳಿತ ಮಂಡಳಿ ಸದಸ್ಯರ ಸಮಿತಿ ಕಲ್ಯಾಣ ಕರ್ನಾಟಕ ವಿಭಾಗದ ಎಲ್ಲ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಈ ಸಂಸ್ಥೆ ಕಾರಣೀಭೂತ ಆಗಬೇಕೆನ್ನುವುದು ನಮ್ಮೆಲ್ಲರ ಆಶಯ. ಜನ ಕಲ್ಯಾಣಕ್ಕೆ ಈ ಸಂಘ ಕಂಕಣ ತೊಟ್ಟು ಕಲ್ಯಾಣ ಕರ್ನಾಟಕದ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನೂ ಮಾಡುವಂತಾಗಲಿ ಎಂದು ಹಾರೈಸಿ ಶುಭ ಕೋರುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News