ಬೆಂಗಳೂರು: ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 54ಕ್ಕೆ ಏರಿಕೆ

Update: 2020-06-09 10:10 GMT

ಬೆಂಗಳೂರು, ಜೂ.9: ಲಾಕ್‌ಡೌನ್ ಸಡಿಲಿಕೆ ನಂತರ ನಗರದ ಕೊರೋನ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ದಿನೇ ದಿನೇ ಹೊಸ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಕಂಟೈನ್ಮೆಂಟ್ ಝೋನ್‌ಗಳನ್ನು ಹೆಚ್ಚಳ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.

ನಗರದಲ್ಲಿ ಕಳೆದ 10 ದಿನಗಳಿಂದ 30 ಹೊಸ ಪ್ರದೇಶಗಳಲ್ಲಿ ಕೊರೋನ ಸೋಂಕಿತರು ಪತ್ತೆಯಾಗುತ್ತಿರುವುದರಿಂದ 46 ಇದ್ದ ಕಂಟೈನ್ಮೆಂಟ್ ಝೋನ್‌ಗಳನ್ನು 54ಕ್ಕೆ ಹೆಚ್ಚಳ ಮಾಡಲಾಗಿದೆ. ದಾಸಹರಳ್ಳಿ ವಲಯದ ಬಾಗಲಗುಂಟೆ, ಚೊಕ್ಕಸಂದ್ರ, ಪಶ್ಚಿಮ ವಲಯದ ಛಲವಾದಿ ಪಾಳ್ಯದಲ್ಲಿ ಎರಡು ಕಂಟೈನ್ಮೆಂಟ್ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.

ಅದೇರೀತಿ ಸಿಂಗಸಂದ್ರ, ಪಾದರಾಯನಪುರ, ಬೆಳ್ಳಂದೂರು, ವಿವಿ ಪುರಂ ಸೇರಿದಂತೆ ಒಟ್ಟು 54 ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್‌ಗಳೆಂದು ಗುರುತಿಸಿ ಆ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.

ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆಯೂ ಏರಿಕೆಯಾಗುತ್ತಿರುವುದರಿಂದ ಇಡೀ ವಾರ್ಡ್ ಅನ್ನು ಬಂದ್ ಮಾಡುವ ಬದಲು ಕೊರೋನ ಸೋಂಕಿತನ ಮನೆ ಮತ್ತು ಆತ ವಾಸವಾಗಿರುವ ಸ್ಥಳವನ್ನು ಮಾತ್ರ ಕಂಟೈನ್ಮೆಂಟ್ ಮಾಡಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಜೂನ್‌ನಲ್ಲಿ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದರೂ ಜನ ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಹೊಸ ಪ್ರದೇಶಗಳಿಗೂ ಸೋಂಕು ಹರಡುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜುಲೈ ವೇಳೆಗೆ ಕೊರೋನ ಸೋಂಕಿತರ ಸಂಖ್ಯೆ ದುಪ್ಪಟ್ಟುಗೊಳ್ಳುವ ಸಾಧ್ಯತೆಗಳಿವೆ. ಸೋಂಕು ಲಕ್ಷಣಗಳು ಉಲ್ಬಣಿಸದಂತೆ ಬಿಬಿಎಂಪಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News