ಕೊರೋನ ನಿಯಂತ್ರಣದ ಬಗ್ಗೆ ಸರಕಾರಕ್ಕೆ ಸಲಹೆ ನೀಡುವುದಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ. 14: ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಸರಕಾರಕ್ಕೆ ಯಾವುದೇ ಸಲಹೆ ನೀಡುವುದಿಲ್ಲ. ಅವರು ಕೊಡುವ 'ಪ್ರಸಾದ' ಸ್ವೀಕರಿಸುತ್ತೇವೆ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿ ಪಕ್ಕದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ವಿಶೇಷ ಪೂಜೆ, ಹವನ-ಹೋಮ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಸರಕಾರದಲ್ಲಿ ಮಂತ್ರಿ ಆಗಿರುವವರು ವೈದ್ಯರಿದ್ದಾರೆ. ಹೀಗಾಗಿ ನಾವು ಸರಕಾರಕ್ಕೆ ಯಾವುದೇ ಸಲಹೆಯನ್ನು ನೀಡುವುದಿಲ್ಲ. ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆಂದು ಕಾದು ನೋಡುತ್ತೇವೆ ಎಂದರು.
ಕೆಪಿಸಿಸಿ ಕಚೇರಿ ಪಕ್ಷದಲ್ಲಿನ ನೂತನ ಕಟ್ಟಡ ಕಾಮಗಾರಿ ಎರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ ಪುನಃ ಕೆಲಸ ಆರಂಭ ಮಾಡಿದ್ದು, ಕಚೇರಿ ವಾಸ್ತು, ಪಕ್ಷಕ್ಕೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ವಿಘ್ನ ನಿವಾರಣೆ ಹೋಮ, ವಿಶೇಷ ಪೂಜೆ ನೆರವೇರಿಸಲಾಗಿದೆ. ಜೊತೆಗೆ ಕೊರೋನ ಸೋಂಕು ಆದಷ್ಟು ಬೇಗ ಹೋಗಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದು ಹೇಳಿದರು.
ಮುಂದಿನ ಆರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆ ಬಳಿಕ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಗುವುದು ಎಂದು ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪದಗ್ರಹಣ: ಪದಗ್ರಹಣ ಕಾರ್ಯಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದು, ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಮಲ್ಲಿಕಾರ್ಜು ಖರ್ಗೆ ಸೇರಿದಂತೆ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.
ಜೂ.29ಕ್ಕೆ ವಿಧಾನ ಪರಿಷತ್ ಚುನಾವಣೆ ನಿಗದಿಯಾಗಿದೆ. ಹೀಗಾಗಿ ಈ ಮಧ್ಯೆ ಪದಗ್ರಹಣ ಕಾರ್ಯಕ್ರಮ ನಡೆಸುವ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಬೇಕಿದೆ. ಆದುದರಿಂದ ಪಕ್ಷದ ಮುಖಂಡರಿಗೆ ಚರ್ಚಿಸಿ ಪರಿಷತ್ ಚುನಾವಣೆಯಾದ ಬಳಿಕ ಪದಗ್ರಹಣ ಕಾಯಕ್ರಮ ನಡೆಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ಸರಕಾರ ಕೇಂದ್ರದಲ್ಲಿ ಎರಡನೆ ಅವಧಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಆದರೂ ಅವರು ಕೊಟ್ಟ ಯಾವ ಭರವಸೆಯನ್ನು ಈಡೇರಿಸಿಲ್ಲ. ಅವರು ನುಡಿದಂತೆ ನಡೆದಿಲ್ಲ. ಇನ್ನೇನು ಮಾತಾಡುತ್ತಾರೋ ನಾವು ಕಾದುನೋಡುತ್ತೇವೆ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ