ಲಡಾಕ್‌ನಲ್ಲಿ ಹುತಾತ್ಮರಾದ ಕರ್ನಲ್ ಕುಟುಂಬಕ್ಕೆ 5 ಕೋಟಿ, ಪತ್ನಿಗೆ ಉದ್ಯೋಗ : ತೆಲಂಗಾಣ ಸರ್ಕಾರ

Update: 2020-06-20 04:50 GMT
ಸಂತೋಷ್‌ ಬಾಬು

ಹೈದರಾಬಾದ್: ಭಾರತ- ಚೀನಾ ಗಡಿಯಲ್ಲಿ ಸಂಘರ್ಷದ ವೇಳೆ ಹುತಾತ್ಮರಾದ ಕರ್ನಲ್ ಬಿಕ್ಕುಮಲ್ಲಾ ಸಂತೋಷ್ ‌ಬಾಬು (39) ಅವರ ಕುಟುಂಬಕ್ಕೆ ಐದು ಕೋಟಿ ರೂ. ಪರಿಹಾರವನ್ನು ತೆಲಂಗಾಣ ಸರ್ಕಾರ ಘೋಷಿಸಿದೆ. ಜತೆಗೆ ಹುತಾತ್ಮ ಕರ್ನಲ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಘೋಷಿಸಿದ್ದಾರೆ.

ಗಡಿಯಲ್ಲಿ ದೇಶ ಕಾಯುತ್ತಿರುವ ಯೋಧರ ಬೆಂಬಲಕ್ಕೆ ಇಡೀ ದೇಶ ಇದೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ. ಸೋಮವಾರ ರಾತ್ರಿ ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಿ ದಾಳಿಯಿಂದ ಮೃತಪಟ್ಟ ಇತರ 19 ಸೈನಿಕರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದ್ದಾರೆ.

ಕೇಂದ್ರ ಹಾಗೂ ಇತರ ರಾಜ್ಯ ಸರ್ಕಾರಗಳು ಸೈನಿಕರ ಕುಟುಂಬಗಳ ನೆರವಿಗೆ ಮುಂದಾಗಬೇಕು ಎಂದು ವರ್ಚುವಲ್ ಸರ್ವಪಕ್ಷಗಳ ಸಭೆಯಲ್ಲಿ ಚಂದ್ರಶೇಖರ ರಾವ್, ಪ್ರಧಾನಿಗೆ ಮನವಿ ಮಾಡಿದರು. ಇಡೀ ದೇಶ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಸೈನಿಕರ ಹಾಗೂ ಅವರ ಕುಟುಂಬಗಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು ಎಂದು ಸಲಹೆ ಮಾಡಿದರು.

ಹಣಕಾಸು ಪರಿಹಾರದ ಜತೆಗೆ ಕರ್ನಲ್ ಪತ್ನಿಗೆ ಗ್ರೂಪ್-1 ಸರ್ಕಾರಿ ಉದ್ಯೋಗ, ಮನೆ ನಿವೇಶನವನ್ನೂ ನೀಡಲಾಗುವುದು ಎಂದು ಸಿಎಂ ಪ್ರಕಟಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಎಲ್ಲೆಡೆ ಹಣಕಾಸು ಕೊರತೆ ಇದ್ದು, ಸರ್ಕಾರಗಳು ವೆಚ್ಚವನ್ನು ಕನಿಷ್ಠಗೊಳಿಸಿ ಯೋಧರ ಕುಟುಂಬಗಳ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News