ಬೆಂಗಳೂರು: ಬಹುಕೋಟಿ ಆಸ್ತಿ ಆಸೆಗೆ ತಂದೆಯನ್ನೇ ಕೊಲ್ಲಲು ಸುಪಾರಿ ನೀಡಿ ಪುತ್ರ

Update: 2020-06-20 11:48 GMT

ಬೆಂಗಳೂರು, ಜೂ.19: ಬಹುಕೋಟಿ ಆಸ್ತಿ ಆಸೆಗಾಗಿ ತಂದೆಯನ್ನೇ ಪುತ್ರ ಸುಪಾರಿ ನೀಡಿ ಕೊಲೆಗೈದಿರುವ ಪ್ರಕರಣವನ್ನು ಇಲ್ಲಿನ ತಲಘಟ್ಟಪುರ ಠಾಣಾ ಪೊಲೀಸರು ಬೇಧಿಸಿದ್ದಾರೆ.

ಬಳ್ಳಾರಿಯ ಸ್ಟೀಲ್ ಅಂಡ್ ಅಲೈ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಿಂಗನಮನ ಮಾಧವ ಎಂಬುವರು ಕೊಲೆಯಾದ ತಂದೆಯಾಗಿದ್ದು, ಈ ಪ್ರಕರಣದಲ್ಲಿ ರಿಯಾಝ್, ಅಬ್ದುಲ್ ಶೇಕ್, ಶಹಬಾಝ್, ಶಾರುಖ್, ಆದಿಲ್ ಖಾನ್ ಹಾಗೂ ಸಲ್ಮಾನ್ ಎಂಬವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಮಾಧವ ಅವರ ಸಹೋದರ ಶಿವರಾಮ್ ಪ್ರಸಾದ್ ಹಾಗೂ ಮಾಧವ ಕಿರಿಯ ಮಗ ಹರಿಕೃಷ್ಣ ತಲೆಮರೆಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮೃತ ಮಾಧವ ಅವರು ಬಳ್ಳಾರಿಯವರಾಗಿದ್ದು, 2003-04ರಲ್ಲಿ ಬಳ್ಳಾರಿಯಲ್ಲಿ ಸ್ಟೀಲ್ ಮತ್ತು ಅಲೈ ಎಂಬ ಕಂಪೆನಿ ಸ್ಥಾಪಿಸಿ ಆಸ್ತಿ ಸಂಪಾದನೆ ಮಾಡಿದ್ದರು. ಸುಮಾರು 2000 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆದಿತ್ತು. 100 ಕೋಟಿ ರೂ. ಮೌಲ್ಯಕ್ಕೂ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ. ಇವರ ಮೊದಲ ಮಗ ಯಾವುದೇ ವಿಷಯದಲ್ಲಿ ಆಸಕ್ತಿ ತೋರಿಸದೆ ನಿರ್ಲಿಪ್ತನಾಗಿದ್ದಾನೆ. 2ನೇ ಮಗ ಮಾನಸಿಕ ಅಸ್ವಸ್ಥ. ಹೀಗಾಗಿ 3ನೇ ಮಗ ಹರಿಕೃಷ್ಣ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ.

ಕಂಪೆನಿಯ ಒಡೆತನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹರಿಕೃಷ್ಣ ಮತ್ತು ತಮ್ಮ ಶಿವರಾಮ್ ಪ್ರಸಾದ್ ಅವರು ಮಾಧವನನ್ನು ಕೊಲೆ ಮಾಡಲು ಎರಡು ತಂಡಗಳಿಗೆ ಸುಪಾರಿ ಕೊಟ್ಟಿದ್ದರು. ಆ ಎರಡೂ ತಂಡಗಳಿಂದ ಕೊಲೆ ಮಾಡುವಲ್ಲಿ ವಿಳಂಬವಾಗಿತ್ತು. ಹೀಗಾಗಿ 3ನೇ ತಂಡದ ಮುಖ್ಯಸ್ಥ ರಿಯಾಝ್ ಗೆ 25 ಲಕ್ಷ ರೂ. ಮೊತ್ತದ ಸುಪಾರಿ ನೀಡಿದ್ದರು. ತಂಡದಲ್ಲಿದ್ದ 5 ಆರೋಪಿಗಳು ತಲಾ 5 ಲಕ್ಷ ಹಂಚಿಕೊಳ್ಳುವ ಮಾತುಕತೆಯಾಗಿತ್ತು. ಏಳುವರೆ ಲಕ್ಷ ರೂ. ಮುಂಗಡ ಕೂಡ ಪಾವತಿಯಾಗಿತ್ತು. ಮಾಧವನ ಚಲನವಲನಗಳ ಮೇಲೆ ನಿಗಾವಹಿಸಿದ್ದ ಆರೋಪಿಗಳು ಫೆ.14ರಂದು ಮಧ್ಯಾಹ್ನ 1:30ರ ಸುಮಾರಿಗೆ ರಾಯಲ್ ಫಾರ್ಮ್ಸ್ ಲೇಔಟ್ ಗೇಟ್ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಿದರು. ಮಾಧವ ಸಾವನ್ನಪ್ಪಿದ್ದಾನೆ ಎಂದು ಖಚಿತಪಡಿಸಿಕೊಂಡ ನಂತರ ಆರೋಪಿ ರಿಯಾಝ್ ಎಲ್ಲ ಆರೋಪಿಗಳು ತಲೆಮರೆಸಿಕೊಳ್ಳುವಂತೆ ಸಲಹೆ ಮಾಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ಆಯುಕ್ತರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News