ಗುಡಿಸಲು ರಹಿತ ರಾಜ್ಯ ನಿರ್ಮಾಣದ ಗುರಿ: ವಸತಿ ಸಚಿವ ವಿ.ಸೋಮಣ್ಣ

Update: 2020-06-20 12:39 GMT

ಬೆಂಗಳೂರು, ಜೂ.20: ಗೃಹ ಮಂಡಳಿಯು ಜನಸಾಮಾನ್ಯರಿಗೆ ಸೂರು ಒದಗಿಸುವ ಉದ್ದೇಶದಿಂದ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಹಾಗೂ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಸೂರನ್ನು ಒದಗಿಸಿ, ಗುಡಿಸಲು ರಹಿತ ರಾಜ್ಯವನ್ನಾಗಿಸಲು ಶ್ರಮಿಸಬೇಕು ಎಂದು ವಸತಿ ಸಚಿವ ಹಾಗೂ ಗೃಹ ಮಂಡಳಿ ಅಧ್ಯಕ್ಷ ವಿ. ಸೋಮಣ್ಣ ಇಂದಿಲ್ಲಿ ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ.

ಶನಿವಾರ ಇಲ್ಲಿನ ಕಾವೇರಿ ಭವನದಲ್ಲಿರುವ ಕರ್ನಾಟಕ ಗೃಹ ಮಂಡಳಿ ಕಚೇರಿಯಲ್ಲಿ ನಿವೇಶನ ಹಾಗೂ ಮನೆಗಳ ಹಂಚಿಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ವಿಜಯಪುರದಲ್ಲಿ ಸುಮಾರು 415 ನಿವೇಶನಗಳ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲು ಗೃಹ ಮಂಡಳಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಒಂದು ತಿಂಗಳೊಳಗಾಗಿ ವರದಿಯನ್ನು ನೀಡಲು ಸೂಚಿಸಿದರು.

ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಸರಕಾರ ಹೊಂದಿದ್ದು ಇದರಲ್ಲಿ ಯಾವುದೇ ಲೋಪವಾದರೂ ಸಹಿಸುವುದಿಲ್ಲ. ಸೂರು ಒದಗಿಸುವಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸುವುದು ಕಂಡುಬಂದಲ್ಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮಣ್ಣ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಒಂದು ಲಕ್ಷ ಬಹುಮಹಡಿ ಕಟ್ಟಡ ಕಟ್ಟಲು ಮಂಜೂರಾಗಿದ್ದು, 48 ಸಾವಿರ ಕಟ್ಟಡಗಳಿಗೆ ಆದೇಶ ನೀಡಲಾಗಿದ್ದು, 28 ಸಾವಿರ ಕಟ್ಟಡಗಳು ಪ್ರಗತಿಯಲ್ಲಿವೆ. ಬಹುತೇಕ ಜಿಲ್ಲೆಗಳಲ್ಲಿ ಕೆಎಚ್‍ಬಿ ನಿವೇಶನ, ಮನೆಗಳು ನಿರೀಕ್ಷಿತ ಮಟ್ಟದಲ್ಲಿ ವಿಲೇವಾರಿಯಾಗುತ್ತಿಲ್ಲ. ವಿಲೇವಾರಿಗಾಗಿ ಪ್ರಚಾರ ಹಾಗೂ ಜಿಲ್ಲಾಧಿಕಾರಿಗಳ ವೆಬ್‍ಸೈಟ್‍ನಲ್ಲಿ ನಿವೇಶನ-ಮನೆಗಳ ವಿವರವನ್ನು ಪ್ರಕಟಿಸಲು ಸೂಚಿಸಿದರು.

ಇನ್ನು ಮುಂದೆ ಆಸ್ತಿ ವಿಲೆವಾರಿಗೆ ಎಕ್ಸ್ ಪೋ-ಇಲ್ಲ ದಿನನಿತ್ಯವೂ ಆಸ್ತಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರೈಸದ ಅಭಿಯಂತರರಿಗೆ ನೋಟಿಸ್ ಜಾರಿ ಮಾಡುವಂತೆ ಮುಖ್ಯ ಇಂಜಿನಿಯರ್ ಗಳಿಗೆ ಸೂಚಿಸಿದರಲ್ಲದೆ, ಎಲ್ಲ ಮಂಡಳಿಯ ಅಭಿಯಂತರರು ಇನ್ನು ಮುಂದೆ ಮಾಸಿಕ ದಿನಚರಿ ಸಲ್ಲಿಸಬೇಕು ಎಂದು ಅವರು ಇದೇ ವೇಳೆ ನಿರ್ದೇಶನ ನೀಡಿದರು.

ಕೇಂದ್ರ ಪುರಸ್ಕೃತ ಹಾಗೂ ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಗಳಡಿ ನಗರ ಪ್ರದೇಶದಲ್ಲಿ ನಿರ್ಮಿಸುವ ಮನೆಗಳಿಗೆ ಫಲಾನುಭವಿ ಸುಮಾರು 2-3 ಲಕ್ಷ ರೂ. ವಂತಿಗೆ ಭರಿಸಬೇಕಿದ್ದು ಉಳಿದಂತೆ ಸರಕಾರವು ಸುಮಾರು 3 ರಿಂದ 3.50 ಲಕ್ಷ ರೂ.ಭರಿಸುತ್ತಿತ್ತು. ಇದರಿಂದ ಬಡವರಿಗೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸಮಸ್ಯೆಯಾಗುತ್ತಿತ್ತು. ಇದನ್ನು ಪರಿಹರಿಸಲು ಸರಕಾರವು ಒಂದು ಪಾಲಸಿ ನಿರ್ಣಯ ಕೈಗೊಂಡಿದೆ. ಫಲಾನುಭವಿಗೆ ಮನೆಯ ಜೊತೆಗೆ ಪ್ರಮಾಣಕ್ಕನುಗುಣವಾದ ಜಮೀನು ಭಾಗವನ್ನು ನೀಡಲಾಗುವುದು. 15 ವರ್ಷದವರೆಗೆ ಪರಭಾರೆ ಮಾಡಬಾರದು. ಇದನ್ನು ಅಡಮಾನವಾಗಿ ನೀಡಿ ಬ್ಯಾಂಕಿನಲ್ಲಿ ಸಾಲ ಪಡೆಯಬಹುದು. ಈ ಬಗ್ಗೆ ಇಂದು ಸರಕಾರಿ ಆದೇಶ ಹೊರ ಬೀಳಲಿದೆ ಎಂದು ಸೋಮಣ್ಣ ಇದೇ ವೇಳೆ ತಿಳಿಸಿದರು.

ಸಭೆಯಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿ ಮನೋಜ್‍ ಕುಮಾರ್ ಮೀನಾ, ಗೃಹ ಮಂಡಳಿ ಆಯಕ್ತ ರಮೇಶ್, ಮುಖ್ಯ ಇಂಜಿನಿಯರ್ ನಂಜುಂಡಪ್ಪ ಹಾಗೂ 32 ಜಿಲ್ಲೆಯ ಅಭಿಯಂತರರುಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News