ಬೆಂಗಳೂರು: ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿಗಳಿಗೆ ಕೊರೋನ ದೃಢ
Update: 2020-06-20 20:39 IST
ಬೆಂಗಳೂರು, ಜೂ.20: ನಗರದ ಮೆಡಿಕಲ್ ಕಾಲೇಜೊಂದರ ಐವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಮೆಡಿಕಲ್ ಕಾಲೇಜಿನಲ್ಲಿ ಆತಂಕ ಮನೆ ಮಾಡಿದೆ.
ನಗರದ ವಿಕ್ಟೋರಿಯಾ ಆಸ್ಪತ್ರೆಯ ಕಂಟ್ರೋಲ್ ರೂಂನಲ್ಲಿ ರೋಗಿಗಳ ಪ್ರವೇಶ ಮತ್ತು ಬಿಡುಗಡೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೆಡಿಕಲ್ ಕಾಲೇಜಿನ ಐವರು ಪಿಜಿ ವೈದ್ಯ ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಮೆಡಿಕಲ್ ಕಾಲೇಜಿನ ಡೀನ್ ಅವರೊಂದಿಗೂ ಸೋಂಕಿತ ವೈದ್ಯ ವಿದ್ಯಾರ್ಥಿಗಳು ಪ್ರಾಥಮಿಕ ಸಂಪರ್ಕವಿರಿಸಿಕೊಂಡಿದ್ದರು. ಇದೇ ರೀತಿ ಸಾಕಷ್ಟು ವಿದ್ಯಾರ್ಥಿಗಳ ಸಂಪರ್ಕದಲ್ಲೂ ಇದ್ದರು ಎನ್ನಲಾಗಿದೆ. ಹೀಗಾಗಿ ಮೆಡಿಕಲ್ ಕಾಲೇಜು ಆವರಣದಲ್ಲಿ ಆತಂಕ ಎದುರಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕಾಲೇಜಿನ ಡೀನ್ ಡಾ.ಜಯಂತಿ ಹೇಳಿದ್ದಾರೆ.