ಬೆಂಗಳೂರು: ಐಎಎಸ್ ಅಧಿಕಾರಿ ವಿಜಯ ಶಂಕರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2020-06-23 17:02 GMT

ಬೆಂಗಳೂರು, ಜೂ.23: ಐಎಂಎ ಬಹುಕೋಟಿ ಹಗರಣದಲ್ಲಿ ಬಂಧಿತರಾಗಿದ್ದ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ಬಿ.ಎಂ.ವಿಜಯ ಶಂಕರ್(54) ಇಂದು ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಇಲ್ಲಿನ ಜಯನಗರದ ಬಿಎಂಟಿಸಿ ಬಸ್ ಘಟಕದ ಹಿಂಬದಿ 3ನೇ ರಸ್ತೆಯಲ್ಲಿದ್ದ ನಿವಾಸದಲ್ಲಿ ವಿಜಯಶಂಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಮನೆಯಲ್ಲಿ ಪತ್ನಿ ಹಾಗೂ ಪುತ್ರಿ ಇದ್ದರು ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ತಿಲಕನಗರ ಠಾಣಾ ಪೊಲೀಸರು ಹಾಗೂ ಎಫ್ಎಸ್ಎಲ್ ತನಿಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಾಥಮಿಕ ಮಾಹಿತಿ ದಾಖಲಿಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಈ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಅವರ ವಿರುದ್ಧ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಲವು ಆರೋಪಗಳ ಕೇಳಿಬಂದಿತ್ತು.

ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಎಂಎ ಪ್ರಕರಣದಲ್ಲಿ ವಿಜಯ ಶಂಕರ್ ಪ್ರಮುಖ ಆರೋಪಿಗಳ ಪೈಕಿ ಒಬ್ಬರಾಗಿದ್ದು, ಐಎಂಎ ಕಂಪೆನಿ ಮಾಲಕ ಮನ್ಸೂರ್ ಖಾನ್ ಬಳಿಯಿಂದ 1.5 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ತನಿಖಾ ತಂಡ 2019ನೇ ಸಾಲಿನ ಜುಲೈ 8ರಂದು ಬಂಧಿಸಿತ್ತು.

ನಂತರ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ವಿಜಯಶಂಕರ್ ಅವರನ್ನು ಇರಿಸಲಾಗಿತ್ತು. ಬಂಧನದ ಹಿನ್ನೆಲೆಯಲ್ಲಿ ಸರಕಾರ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತು.

ಇದಾದ ಬಳಿಕ ಕೆಲವೇ ದಿನಗಳಲ್ಲಿ ಸಿಟ್(ಎಸ್‌ಐಟಿ) ತಂಡ ಅವರ ಮನೆಯಿಂದ 2.5 ಕೋಟಿ ರೂ. ನಗದು ಜಪ್ತಿ ಮಾಡಿಕೊಂಡಿತ್ತು. ಇದರಲ್ಲಿ ಐಎಂಎ ಹಗರಣದ ಸೂತ್ರಧಾರ ಮನ್ಸೂರ್ ಖಾನ್ ಕೊಟ್ಟಿದ್ದ ಲಂಚದ ಹಣವೂ ಒಳಗೊಂಡಿತ್ತು ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಅವರು ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 

ಐಎಂಎ ಪ್ರಕರಣ ಎಸ್ಐಟಿ(ಸಿಟ್)ಯಿಂದ ಸಿಬಿಐಗೆ ವರ್ಗಾವಣೆ ಆದಾಗಲೂ ವಿಜಯಶಂಕರ್ ಅವರು ಸಿಬಿಐ ತನಿಖೆ ಎದುರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News