ಬಿಜೆಪಿಯಿಂದ ಒಕ್ಕೂಟ ವ್ಯವಸ್ಥೆ ನಾಶ ಮಾಡುವ ಹುನ್ನಾರ: ಡಿ.ಕೆ.ಶಿವಕುಮಾರ್ ವಾಗ್ದಾಳಿ

Update: 2020-06-23 16:13 GMT

ಬೆಂಗಳೂರು, ಜೂ.23: ರಾಜ್ಯ ಸರಕಾರಗಳ ವ್ಯಾಪ್ತಿಯಲ್ಲಿರುವ ಕಾಯ್ದೆಗಳ ಬದಲಾವಣೆಗೆ ಕೇಂದ್ರ ಸರಕಾರ ಮಾರ್ಗಸೂಚಿ ರವಾನಿಸಿದ್ದು, ಇದು ಒಕ್ಕೂಟ ವ್ಯವಸ್ಥೆ ನಾಶ ಮಾಡುವ ಹುನ್ನಾರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಜುಲೈ 2 ರಂದು ರಾಜ್ಯಾದ್ಯಂತ ನಡೆಯಲಿರುವ ಪ್ರತಿಜ್ಞಾ ದಿನ ಕಾರ್ಯಕ್ರಮದ ಪೂರ್ವ ತಯಾರಿ ಕುರಿತ ಸಮಾಲೋಚನಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಡಿ.ಕೆ ಶಿವಕುಮಾರ್, ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟುವ ಸಂಕಲ್ಪ ಕೈಗೊಂಡರು. ಜತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್ ಪಕ್ಷವು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಜನರಿಗೆ ಕೃಷಿ ಮಾಡಲು ಭೂಮಿ ನೀಡಿದೆ. ಅದರೆ ಈಗಿನ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸಣ್ಣ ರೈತರಿಗೆ ಮರಣ ಶಾಸನ ಬರೆಯುತ್ತಿದೆ. ಅದೇ ರೀತಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಇನ್ನು ಅಂತರ್ ರಾಷ್ಟ್ರೀಯ ಕಾರ್ಮಿಕ ಒಕ್ಕೂಟ ಹಾಗೂ ಅಧಿವೇಶನದಲ್ಲಿ ಚರ್ಚಿಸಿ ತಂದ ಕಾರ್ಮಿಕ ಕಾಯ್ದೆಯನ್ನು ಮೂರು ವರ್ಷ ರದ್ದು ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.

ಇನ್ನು ಅವೈಜ್ಞಾನಿಕವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಈ ಬಗ್ಗೆ ಯಾರೂ ಮಾತನಾಡುತ್ತಲೇ ಇಲ್ಲ. ಬೆಲೆ ಕಡಿಮೆ ಮಾಡಬೇಕಾದ ಸಮಯದಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಬೆಲೆ ಏರಿಸಿ ಕೇಂದ್ರ ಸರಕಾರ ಜನ ವಿರೋಧಿ ತೀರ್ಮಾನ ಕೈಗೊಂಡಿದೆ. ಈ ಎಲ್ಲ ವಿಚಾರವಾಗಿ ನಮ್ಮ ಶಾಸಕಾಂಗ ಪಕ್ಷದ ನಾಯಕರ ಜತೆ ಚರ್ಚಿಸಿ, ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ನಿಮಗೆ ಸಂದೇಶ ರವಾನಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ನಾವು ಸಂಪೂರ್ಣ ಸಹಕಾರ ನೀಡಿದರೂ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹೃದಯ ಗೆಲ್ಲಲು ಸಾಧ್ಯವಾಗಿಲ್ಲ. ಇದೊಂದು ಯೂಟರ್ನ್ ಸರಕಾರ. ಬೆಳಗ್ಗೆ ಕೊಟ್ಟ ಹೇಳಿಕೆಯನ್ನು ಸಂಜೆ ಬದಲಾಯಿಸುತ್ತದೆ. ಅಧಿವೇಶನ ಕರೆಯಲಿ ಎಲ್ಲವನ್ನು ಬಿಚ್ಚಿಡುತ್ತೇವೆ. ನಾನಾಗಲಿ ನಮ್ಮ ನಾಯಕರಾದ ಸಿದ್ದರಾಮಯ್ಯನವರಾಗಲಿ ಏನನ್ನೂ ಹೇಳುವುದೇ ಬೇಡ, ಮಾಧ್ಯಮಗಳೇ ಎಲ್ಲವನ್ನು ನಿಮ್ಮ ಮುಂದೆ ವಿವರಿಸುತ್ತಿವೆ ಎಂದು ಅವರು ತಿಳಿಸಿದರು.

ಅಧಿಕಾರ ಇಲ್ಲದಿದ್ದರೂ, ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್ ನಾಯಕರು ರಾಜ್ಯದ ಉದ್ದಗಲಕ್ಕೂ ಸಹಾಯ ಮಾಡಿದರು. ಆ ಮೂಲಕ ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸಿದರು. ರೈತರಿಗೆ ಸಹಾಯ ಮಾಡಿ ಎಂದು ಕೇಳಿಕೊಂಡರೂ ಅವರ ನೆರವಿಗೆ ಸರಕಾರ ಬರಲಿಲ್ಲ. ಬೆಂಬಲ ಬೆಲೆ ನಿಗದಿ ಮಾಡಲಿಲ್ಲ. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಂಕಷ್ಟ ನೋಡಲಾಗದೆ ಕಾಂಗ್ರೆಸ್ ನಾಯಕರು 100 ಕೋಟಿ ರೂಪಾಯಿಗೂ ಹೆಚ್ಚಿನ ತರಕಾರಿ ಖರೀದಿಸಿದರು. ಆ ಮೂಲಕ ಬೆಲೆ ಕುಸಿತ ತಪ್ಪಿಸಿದರು. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ. ಆದರೆ ನಮಗೆ ಜನರ ಬಗ್ಗೆ ಇರುವ ಕಾಳಜಿ, ಬದ್ಧತೆ ಮುಖ್ಯ ಎಂದು ಶಿವಕುಮಾರ್ ಹೇಳಿದರು.

ಹೊರಗಡೆಯಿಂದ ಬರುವ ಜನರಿಗೆ ವಿಮಾನ ಸೌಲಭ್ಯ ಕೊಡುತ್ತೀರಿ. ಆದರೆ ದೇಶ ಕಟ್ಟುವ ಕಾರ್ಮಿಕರಿಗೆ ಬಸ್, ರೈಲು ವ್ಯವಸ್ಥೆ ಕಲ್ಪಿಸಲಿಲ್ಲ. ಇವರ ಬಳಿ ಮೂರು ಪಟ್ಟು ಹಣ ವಸೂಲಿ ಮಾಡಲು ಹೊರಟರು. ಇವರ ಪ್ರಯಾಣಕ್ಕೆ ಸಹಕರಿಸುವ ಬಗ್ಗೆ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಗೆ ಹೇಳಿದಾಗ ಮೊದಲು ಆ ಕೆಲಸ ಮಾಡಿ ಎಂದು ಪ್ರೋತ್ಸಾಹ ನೀಡಿದರು ಎಂದು ಶಿವಕುಮಾರ್ ತಿಳಿಸಿದರು.

ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅವರ ವೈಫಲ್ಯಗಳನ್ನು ಬಿಂಬಿಸುತ್ತಿರುವ ಮಾಧ್ಯಮಗಳೇ ಅದಕ್ಕೆ ಸಾಕ್ಷಿ. ನಿಮಗೆ ಧನ್ಯವಾದಗಳು. ರಾಜ್ಯದಲ್ಲಿ ಸಾವು-ನೋವು ಹೆಚ್ಚುತ್ತಿರುವ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರು ನಮ್ಮ ಸಲಹೆ ಕೇಳಿದರಷ್ಟೇ ಕೊಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಕಾರ್ಯಕರ್ತರಿಗೆ ಧ್ವನಿಯಾಗಲು ಈ ಕಾರ್ಯಕ್ರಮ: ಪ್ರತಿಜ್ಞಾ ಕಾರ್ಯಕ್ರಮ ನನ್ನನ್ನಾಗಲಿ, ಕಾರ್ಯಾಧ್ಯಕ್ಷರನ್ನಾಗಲಿ ಅಥವಾ ಇತರೆ ನಾಯಕರನ್ನು ಬಿಂಬಿಸಿಕೊಳ್ಳಲು ಮಾಡುತ್ತಿಲ್ಲ. ಈ ಕಾರ್ಯಕ್ರಮವನ್ನು ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಕಾರ್ಯಕರ್ತರ ಧ್ವನಿಯಾಗಲು ನಡೆಸಲಾಗುತ್ತಿದೆ. ಕಾರ್ಯಕರ್ತರು ಶಕ್ತಿಶಾಲಿಯಾದರೆ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂಬುದು ನನ್ನ ನಂಬಿಕೆ ಎಂದು ಶಿವಕುಮಾರ್ ತಿಳಿಸಿದರು.

ನನ್ನನ್ನು ಜೈಲಿಗೆ ಕಳುಹಿಸಿದಾಗ ಡಿ.ಕೆ ಶಿವಕುಮಾರ್ ರಾಜಕೀಯ ಅಂತ್ಯವಾಯ್ತು ಎಂದು ಮಾತನಾಡಿದರು. ನಮ್ಮ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಜೈಲಿಗೆ ಬಂದು ನನ್ನ ಜತೆ ಒಂದು ಗಂಟೆ ಮಾತುಕತೆ ನಡೆಸಿ ನನಗೆ ಶಕ್ತಿ ತುಂಬಿದರು. ಈಗ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಅವರು ಹೇಳಿದರು.

ಈ ಪಕ್ಷವನ್ನು ಮಾಸ್ ಬೇಸ್ ಪಾರ್ಟಿಯಿಂದ ಕೇಡರ್ ಬೇಸ್ ಪಕ್ಷವನ್ನಾಗಿ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಬೂತ್ ಮಟ್ಟದಲ್ಲಿ ಪಕ್ಷ ಬಲವಾಗುವಂತೆ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನಾವು ಎಲ್ಲರೂ ದೇಶಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸಬೇಕು ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News