ಕೊರೋನ ಸಂದರ್ಭದಲ್ಲಿ ಅಸಂಘಟಿತ ಮಹಿಳಾ ದುಡಿಮೆದಾರರ ಸಂಕಟಗಳು

Update: 2020-06-23 18:39 GMT

ಭಾರತದಲ್ಲಿ ಶೇ.65ರಷ್ಟು ಮಹಿಳೆಯರು ಕೃಷಿ ಮತ್ತು ಅದಕ್ಕೆ ಪೂರಕವಾದ ಹೈನುಗಾರಿಕೆ, ಗುಡಿ ಕೈಗಾರಿಕಾ ವಲಯದಲ್ಲಿ ದುಡಿಯುತ್ತಿದ್ದಾರೆ. ಇಲ್ಲಿ ಅವರಿಗೆ ಪುರುಷರಿಗೆ ಸಮಾನವಾದ ವೇತನ ಯಾವತ್ತೂ ಸಿಗುವುದಿಲ್ಲ. ಅಷ್ಟೇ ಅಲ್ಲ ಸದಾ ಕೆಲಸ ಕಳೆದುಕೊಳ್ಳಬಹುದಾದ ಭೀತಿಯಲ್ಲಿ ಅವರು ತತ್ತರಿಸುತ್ತಾ ಇರುತ್ತಾರೆ. ಕಾಫಿ, ಮೆಣಸು, ಏಲಕ್ಕಿ, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳ ತೋಟಗಳಲ್ಲಿ ಹೆಚ್ಚಾಗಿ ಅಸಂಘಟಿತ ಮಹಿಳೆಯರು ದುಡಿಯುತ್ತಿದ್ದಾರೆ. ಅಷ್ಟೇ ಅಲ್ಲ ದೂರ ದೂರದ ರಾಜ್ಯಗಳಿಂದ ವಲಸೆ ಬಂದಂತಹವರೂ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಈ ಕೊರೋನ ಸಂದರ್ಭದಲ್ಲಿ ಅವರು ಇಲ್ಲಿರಲಾಗದೇ ತಮ್ಮೂರಿಗೆ ಹೋಗಲಾಗದೇ ದಾರಿ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡಿ ಹೋಗಿದ್ದಾರೆ.

ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ನಮ್ಮ ಮಹಿಳೆಯರು, ದುಡಿದು ಒಂದಿಷ್ಟು ಹಣ ಗಳಿಸಲು ಸಾಧ್ಯವಾಗಿದೆಯೇ ಹೊರತು, ಕಿತ್ತು ತಿನ್ನುವಂತಹ ಹಲವಾರು ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಿದ್ದಾರೆ. ಮೊದಲೇ ಅಸಂಘಟಿತ ವಲಯಗಳಲ್ಲಿ ದುಡಿಯುವ ಮಹಿಳೆಯರು ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಮೆ ಮಾಡುತ್ತಿರುತ್ತಾರೆ. ದೌರ್ಜನ್ಯ, ಕಿರುಕುಳ, ಚುಡಾಯಿಸುವಿಕೆಯನ್ನು ಸದಾ ಅನುಭವಿಸುತ್ತಾ ಹೆಚ್ಚಿನಂಶ ಅನಾರೋಗ್ಯಕರ ಪರಿಸರದಲ್ಲಿ ಇವರು ದುಡಿಯುವುದು ಮಾಮೂಲಾಗಿರುತ್ತದೆ. ಬಹುಪಾಲು ಪುರುಷರೇ ಮೇಲಧಿಕಾರಿಗಳು ಆಗಿರುವುದರಿಂದ ದಬ್ಬಾಳಿಕೆ, ಲೈಂಗಿಕ ಕಿರುಕುಳದಂತಹ ಸಮಸ್ಯೆಗಳಿಗೆ ಬಲಿಪಶುಗಳಾಗಿರುತ್ತಾರೆ. ದುಡಿಮೆಯ ಸಂದರ್ಭದಲ್ಲಿ ಬಹಳಷ್ಟು ಅಸಂಘಟಿತ ಮಹಿಳಾ ಕಾರ್ಮಿಕರು ಎದುರಿಸುವಂತಹ, ಕಾನೂನಾತ್ಮಕವಾದ ಅತ್ಯಂತ ವ್ಯಾಪಕ ಅಪರಾಧ ಎಂದರೆ ‘ಲೈಂಗಿಕ ದೌರ್ಜನ್ಯ’ ಮತ್ತು ‘ತಾರತಮ್ಯ’!. ಆದರದು ದಾಖಲಾಗುವುದು, ನ್ಯಾಯಕ್ಕಾಗಿ ಹೋರಾಟದ ರೂಪವನ್ನು ಪಡೆಯುವುದು ಬಹಳ ಕಡಿಮೆ. ಅಸಂಘಟಿತ ವಲಯದಲ್ಲಿನ ಮಹಿಳೆಯರಿಗೆ ಉದ್ಯೋಗ ಎನ್ನುವುದು ಆರ್ಥಿಕ ವಾಗಿ ಅತ್ಯಂತ ಅವಶ್ಯಕ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಅವರು ಕೆಲಸವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಹೀಗಾಗಿ ತಮ್ಮ ಜೀವನದ ಯಾವುದಾದರೂ ಒಂದು ಸಂದರ್ಭದಲ್ಲಿ, ದುಡಿಯುವ ಶೇ.60ರಷ್ಟು ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಒಂದಲ್ಲ ಒಂದು ಬಾರಿ ಎದುರಿಸಿ ಕೂಡ ಉಸಿರೆತ್ತದೇ ದುಡಿಯುತ್ತಿರುತ್ತಾರೆ. ಅದರಲ್ಲೂ ಅಸಂಘಟಿತ ವಲಸೆ ಮಹಿಳಾ ಕಾರ್ಮಿಕರ ಸಂಕಷ್ಟಗಳಂತೂ ಪದಗಳಿಗೇ ಸಿಗಲಾರದಂತಹವು. ಇಷ್ಟೆಲ್ಲದರ ಮಧ್ಯೆ ಈಗ ಕೊರೋನದಂತಹ ವ್ಯಾಪಕವಾದ ಸೋಂಕು ಮತ್ತು ಅದರ ನಿಯಂತ್ರಣಕ್ಕಾಗಿ ಹೇರಲ್ಪಟ್ಟ ಲಾಕ್‌ಡೌನ್‌ನಿಂದಾಗಿ ಇಂತಹ ಹೆಣ್ಣುಮಕ್ಕಳು ಇನ್ನಷ್ಟು ಶೋಚನೀಯವಾದ ಸ್ಥಿತಿಯನ್ನು ತಲುಪುವ ಹಾಗೆ ಆಗಿಬಿಟ್ಟಿರುವುದು ದುರಂತ.

ಅನಿರೀಕ್ಷಿತವಾಗಿ ಭಾರತಕ್ಕೆ ಅಂಟಿಕೊಂಡಂತಹ, ತಕ್ಷಣಕ್ಕೆ ನಿಯಂತ್ರಿಸಲಾಗದ ಕೊರೋನ ಸೋಂಕು ಹಾಗೂ ಪೂರ್ವಪರ ವಿವೇಚನೆ ಇಲ್ಲದೇ ದಿಢೀರ್ ಹೇರಿದ ಲಾಕ್‌ಡೌನ್‌ನಿಂದಾಗಿ, ಅಸಂಘಟಿತ ವಲಯದ ಕಾರ್ಮಿಕರು, ಅದರಲ್ಲೂ ಮುಖ್ಯವಾಗಿ ದಿನಗೂಲಿ ನೌಕರರು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಆದರೆ ಇದರಲ್ಲೂ ಪ್ರಮುಖವಾಗಿ ಮಹಿಳೆಯರ ಸಮಸ್ಯೆಗಳನ್ನು ನಾವು ಪ್ರತ್ಯೇಕವಾಗಿ ಹಾಗೂ ವಿಶೇಷವಾದ ಕಾಳಜಿಯಿಂದ ಸೂಕ್ಷ್ಮವಾಗಿ ಅಧ್ಯಯನ ಮಾಡುವಂತಹ ಅವಶ್ಯಕತೆ ಇದೆ. ಅದರಲ್ಲೂ ಇನ್ನೂ ಮುಖ್ಯವಾಗಿ, ವಲಸೆ ಕಾರ್ಮಿಕ ಮಹಿಳೆಯರ ಸಂಕಷ್ಟವಂತೂ ಹೇಳಿ ಮುಗಿಸಲಾಗದಷ್ಟು ಯಾತನಾದಾಯಕವಾದುದು. ತಮ್ಮ ತಮ್ಮ ಊರುಗಳಿಗೆ ತರಾತುರಿಯಲ್ಲಿ ವಾಪಸಾಗಬೇಕಾದ ಸಂದರ್ಭದಲ್ಲಿ ಬಸ್, ರೈಲುಗಳ ಸೌಲಭ್ಯ ಕೂಡ ಇಲ್ಲದೇ ಕಾಲ್ನಡಿಗೆಯಲ್ಲೇ ಇವರು ನೂರಾರು ಕಿಲೋಮೀಟರ್‌ಗಳು ಸಾಗಬೇಕಾಯಿತು. ಇವರಲ್ಲಿ ಗರ್ಭಿಣಿಯರು, ಎಳೆ ಬಾಣಂತಿಯರು, ರಜಸ್ವಲೆಯಾದವರು, ಕಾಯಿಲೆ ಇರುವವರು, ತುತ್ತು ಅನ್ನ ನೀರಿಗಾಗಿ ಪರದಾಡುತ್ತಾ ಮಕ್ಕಳನ್ನೂ, ಸಾಮಾನು ಸರಂಜಾಮುಗಳನ್ನೂ ಹೊತ್ತು ತಮ್ಮ ಊರಿನ ಕಡೆಗೆ ನಡೆಯುತ್ತಿದ್ದಂತಹ ದೃಶ್ಯ, ಈಗಲೂ ನಡೆಯುತ್ತಲೇ ಇರುವ ಅಸಂಖ್ಯಾತರನ್ನು ಕಾಣುವಾಗ ಸಂಕಟವಾಗುತ್ತದೆ. ಅವರೆಲ್ಲರ ಯಾತನಾದಾಯಕವಾದ ಸ್ಥಿತಿಯನ್ನು ಹೇಗೆ, ಎಷ್ಟು ಹೇಳಿದರೂ ಮುಗಿಯುವುದಿಲ್ಲ.

ಬಹು ಮುಖ್ಯವಾದ ಅಸಂಘಟಿತ ವಲಯದ ಮಹಿಳಾ ದುಡಿಮೆದಾರರು ಎಂದರೆ ನಮ್ಮ ಕೃಷಿ ಕಾರ್ಮಿಕರು. ಭಾರತದಲ್ಲಿ ಶೇ.65ರಷ್ಟು ಮಹಿಳೆಯರು ಕೃಷಿ ಮತ್ತು ಅದಕ್ಕೆ ಪೂರಕವಾದ ಹೈನುಗಾರಿಕೆ, ಗುಡಿ ಕೈಗಾರಿಕಾ ವಲಯದಲ್ಲಿ ದುಡಿಯುತ್ತಿದ್ದಾರೆ. ಇಲ್ಲಿ ಅವರಿಗೆ ಪುರುಷರಿಗೆ ಸಮಾನವಾದ ವೇತನ ಯಾವತ್ತೂ ಸಿಗುವುದಿಲ್ಲ. ಅಷ್ಟೇ ಅಲ್ಲ ಸದಾ ಕೆಲಸ ಕಳೆದುಕೊಳ್ಳಬಹುದಾದ ಭೀತಿಯಲ್ಲಿ ಅವರು ತತ್ತರಿಸುತ್ತಾ ಇರುತ್ತಾರೆ. ಕಾಫಿ, ಮೆಣಸು, ಏಲಕ್ಕಿ, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳ ತೋಟಗಳಲ್ಲಿ ಹೆಚ್ಚಾಗಿ ಅಸಂಘಟಿತ ಮಹಿಳೆಯರು ದುಡಿಯುತ್ತಿದ್ದಾರೆ. ಅಷ್ಟೇ ಅಲ್ಲ ದೂರ ದೂರದ ರಾಜ್ಯಗಳಿಂದ ವಲಸೆ ಬಂದಂತಹವರೂ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಈ ಕೊರೋನ ಸಂದರ್ಭದಲ್ಲಿ ಅವರು ಇಲ್ಲಿರಲಾಗದೇ ತಮ್ಮೂರಿಗೆ ಹೋಗಲಾಗದೇ ದಾರಿ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡಿ ಹೋಗಿದ್ದಾರೆ. ಇವತ್ತು ಶೇ.30ಕ್ಕಿಂತಲೂ ಹೆಚ್ಚು ಮಹಿಳೆಯರು ಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಮಿಕ್ಕ ಶೇ.70ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಸಂಘಟಿತ ವಲಯದ ಹೆಚ್ಚಿನ ಮಹಿಳೆಯರಿಗೆ ಪುರುಷರಿಗೆ ಸಮಾನ ವೇತನ, ಭತ್ತೆ, ಪಿಂಚಣಿ, ಕಚೇರಿ, ಶೌಚಾಲಯ ವ್ಯವಸ್ಥೆ ಹೀಗೆ ಅನೇಕ ಕನಿಷ್ಠ ಅನುಕೂಲಗಳು ಇರುವ ಸಾಧ್ಯತೆಗಳಿರುತ್ತದೆ. ಆದರೆ ಅಸಂಘಟಿತ ವಲಯದ ಹೆಣ್ಣುಮಕ್ಕಳಿಗೆ ದುಡಿಯುವ ಸ್ಥಳಗಳಲ್ಲಿ ಹೆಚ್ಚಾಗಿ ಅನಾರೋಗ್ಯಕರ ವಾತಾವರಣ ಇರುತ್ತದೆ. ಇವರು ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಕಾನೂನಿನ ತಿಳುವಳಿಕೆಯಿಂದ ವಂಚಿತರಾಗಿರುತ್ತಾರೆ. ಕಡಿಮೆ ವೇತನಕ್ಕೆ ಹೆಚ್ಚಿನ ಸಮಯ ದುಡಿಯುವುದು ಇವರಿಗೆ ಅನಿವಾರ್ಯವಾಗಿರುತ್ತದೆ. ಕನಿಷ್ಠ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಕೂಡ ಸಮರ್ಪಕವಾಗಿ ಇರುವುದಿಲ್ಲ. ಗರ್ಭಿಣಿ-ಬಾಣಂತಿಯರಿಗೆ ನೀಡುವ ರಜೆ-ಭತ್ತೆಗಳನ್ನು ಕೂಡ ಪಡೆಯದಂತಹ ಸ್ಥಿತಿ ಇರುತ್ತದೆ. ಮುಖ್ಯವಾಗಿ ಸಂಘಟಿತ-ಅಸಂಘಟಿತ ಎರಡೂ ವಲಯಗಳಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವುದು ಸಾಮಾನ್ಯವಾದ ಸಮಸ್ಯೆ. ಅಸಂಘಟಿತ ವಲಯದಲ್ಲಂತೂ ಲೈಂಗಿಕ ಕಿರುಕುಳದ ಬಹು ದೊಡ್ಡ ಪ್ರಕರಣಗಳು ಕೂಡ ಹೊರ ಬರುವುದಿಲ್ಲ. ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಹೀಗೆ ತಮ್ಮವರಿಂದ ಹಾಗೂ ಅಪರಿಚಿತ ಪುರುಷರಿಂದ ಅನೇಕ ರೀತಿಯ ದೌರ್ಜನ್ಯಕ್ಕೆ ಮಹಿಳೆಯರು ವ್ಯಾಪಕವಾಗಿ ಗುರಿಯಾಗಿದ್ದಾರೆ. ಇವರಿಗೆ ಸರಿಯಾದ ರಕ್ಷಣೆ ಮತ್ತು ನ್ಯಾಯ ಯಾವಾಗಲೂ ಸಿಕ್ಕಿಲ್ಲ. ಈಗಂತೂ ಕೇಳುವಂತೆಯೇ ಇಲ್ಲ. ಅಸಂಘಟಿತ ವಲಯದಲ್ಲಿ ದುಡಿಯುವ ಹೆಚ್ಚಿನ ಹೆಣ್ಣುಮಕ್ಕಳು ಅಶಿಕ್ಷಿತರು ಅಥವಾ ಅಲ್ಪ ವಿದ್ಯಾಭ್ಯಾಸ ಪಡೆದವರೂ ಆಗಿರುತ್ತಾರೆ. ಇಂತಹ ನಮ್ಮ ಬಹುಸಂಖ್ಯಾತ ಹೆಣ್ಣುಮಕ್ಕಳು ದುಡಿಯುತ್ತಿರುವುದು ಕಚ್ಚಾ ಕೆಲಸಗಳಲ್ಲಿ! ಜೊತೆಗೆ ಇಲ್ಲಿ ಎಲ್ಲೂ ಕೆಲಸದ ನಿಶ್ಚಿತತೆ ಇರುವುದಿಲ್ಲ. ಒಪ್ಪಂದಗಳೂ ಇರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ವಲಸೆ ಬಂದ ಹೆಣ್ಣುಮಕ್ಕಳು ಇಂತಹ ಅಸಂಘಟಿತ ದುಡಿಮೆಯಲ್ಲಿ ಪಾಲ್ಗೊಂಡು ಹೆಚ್ಚಿನ ಶೋಷಣೆಗೆ ಗುರಿಯಾಗುವುದನ್ನು ಕಾಣುತ್ತೇವೆ. ಅಸಂಘಟಿತ ವಲಯದಲ್ಲಿ ಹೊರಗೆ ದುಡಿಯುವ ಮಹಿಳೆಯರಲ್ಲಿ ಮುಖ್ಯವಾಗಿ ಮನೆಗೆಲಸದವರು, ಸಿದ್ಧ ಉಡುಪು, ಇಲೆಕ್ಟ್ರಾನಿಕ್, ಚರ್ಮ, ಔಷಧಿ ಕಾರ್ಖಾನೆಗಳಲ್ಲಿ ದುಡಿಯುವವರು, ಕಟ್ಟಡ ಕಾರ್ಮಿಕರು ....... ಮುಂತಾದವರು ಸೇರುತ್ತಾರೆ. ಮನೆಯಲ್ಲೇ ಇದ್ದು ಬೀಡಿ, ಅಗರಬತ್ತಿ, ಹೂಕಟ್ಟುವುದು, ಹಪ್ಪಳ-ಸಂಡಿಗೆ ಮಾಡುವುದು, ಅಡಿಕೆ ಹಾಳೆಯಿಂದ ತಟ್ಟೆ ಬಟ್ಟಲು ತಯಾರಿಸುವುದು, ಹೊಲಿಗೆ-ನೆಯ್ಗೆ, ಜರಿ ಇಂತಹ ಕೆಲಸಗಳನ್ನು ಹೆಚ್ಚಾಗಿ ಮಾಡುವಂತಹ ಮಹಿಳೆಯರೂ ಇದ್ದಾರೆ. ಇವರೆಲ್ಲರೂ ಈ ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸಗಳನ್ನು ಕಳೆದುಕೊಂಡು ಅಥವಾ ತಾವು ಉತ್ಪಾದಿಸಿದ ವಸ್ತುಗಳಿಗೆ ನಿಗದಿತ ಮಾರುಕಟ್ಟೆ ಸೌಲಭ್ಯ ಸಿಗದೇ ಜರ್ಜರಿತರಾಗಿ ಹೋಗಿದ್ದಾರೆ. ಅವರ ಹಾಗೂ ಅವರ ಕುಟುಂಬ ಮತ್ತು ಮಕ್ಕಳ ಆರೋಗ್ಯ ಬದುಕು ಎಲ್ಲ ಕೂಡ ಅಸ್ತವ್ಯಸ್ತವಾಗಿಬಿಟ್ಟಿರುವುದು ದುರಂತ. ಅದನ್ನು ಸರಿಪಡಿಸುವ ದಾರಿಗಳು ಸಹ ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ.

ಒಂದು ವರದಿಯ ಪ್ರಕಾರ ಭಾರತದಲ್ಲಿ 30,000ಕ್ಕೂ ಹೆಚ್ಚು ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳಿವೆ. ಅವುಗಳಲ್ಲಿ ಶೇ.70ರಷ್ಟು ರಫ್ತಿಗಾಗಿ ಉತ್ಪಾದನೆ ಮಾಡುತ್ತಿರುವ ಕಾರ್ಖಾನೆಗಳು. ಇಂತಹ ಸಿದ್ಧ ಉಡುಪು ಕಾರ್ಖಾನೆ ಘಟಕದಲ್ಲಿ ಶ್ರಮದ ಶೋಷಣೆ ತೀವ್ರವಾಗಿರುತ್ತದೆ. ಇಲ್ಲಿ ವೇತನ ಕಡಿಮೆ ಇದ್ದು ಹೆಚ್ಚು ಸಮಯ ಕೆಲಸ ಮಾಡಬೇಕಿರುತ್ತದೆ. ಕೆಲಸದ ಭದ್ರತೆ ಕೂಡ ಇರುವುದಿಲ್ಲ. ರಜೆ ಕೂಡ ಕಡಿಮೆ. ದಿನವಿಡೀ ನಿಂತೇ ಕೆಲಸ ಮಾಡಬೇಕಾದ ಅನಿವಾರ್ಯತೆ ಕೂಡ ಇವರಿಗಿರುತ್ತದೆ. ಈ ಕೊರೋನ ಲಾಕ್‌ಡೌನ್‌ನಿಂದ ಈಗ ಇವರೆಲ್ಲರ ಸ್ಥಿತಿ ಅಯೋಮಯವಾಗಿಬಿಟ್ಟಿದೆ. ಬಹಳಷ್ಟು ಕಡೆ ಇವರಿಗೆ ಅರ್ಧ ವೇತನ ಕೊಟ್ಟಿದ್ದಾರೆ. ರಫ್ತು ಕುಸಿದಿದ್ದರಿಂದ ಈಗ ಉತ್ಪಾದನೆಯನ್ನೇ ಕಡಿಮೆ ಮಾಡಲಾಗುತ್ತಿದೆ. ಜೊತೆಗೆ ಸದ್ಯ ಸಾರ್ವಜನಿಕ ಅಂತರವನ್ನೂ ಕಾಪಾಡಬೇಕಿರುವುದರಿಂದ ಇಂತಹ ಬಹಳಷ್ಟು ಮಹಿಳಾ ಕಾರ್ಮಿಕರು ಕೆಲಸ ಕಳೆದುಕೊಂಡು ಒದ್ದಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಇವರ ಸಂಕಟ ಕೇಳುವವರು ಯಾರು? ಕಾರ್ಮಿಕ ಇಲಾಖೆ ಕೂಡ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಜೊತೆಗೆ ಅಸಂಘಟಿತ ವಲಯದ ಮಹಿಳಾ ದುಡಿಮೆಗಾರರು ತಮ್ಮ ದುಡಿಮೆಯನ್ನು ಯಾವಾಗಲೂ ಕುಟುಂಬಕ್ಕೇ ಹೆಚ್ಚಿನಂಶ ಮೀಸಲಿರಿಸಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದ ರಕ್ತಹೀನತೆ, ಅಲ್ಸರ್, ಬಿಪಿ., ಅಸ್ತಮಾ, ಟಿಬಿ, ಸೊಂಟ ನೋವು, ಕುತ್ತಿಗೆ ನೋವು, ಮೂತ್ರಪಿಂಡ, ಮೂಳೆ ಮತ್ತು ಸಂದುಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಂದ ಈ ಮೊದಲೇ ಬಳಲುತ್ತಿದ್ದರು. ಈಗ ಅದರ ಪ್ರಮಾಣ ಈ ಆರ್ಥಿಕ ಕೊರತೆಯ ಸಂದರ್ಭದಲ್ಲಿ ಇನ್ನೂ ಹೆಚ್ಚೇ ಆಗಿದೆ. ಇದರ ಜೊತೆಗೆ ಸರಿಯಾದ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳು ಸಿಗದೆ ಗರ್ಭಪಾತ, ಬಸಿರು ಸಂಬಂಧಿ ಕಾಯಿಲೆಗಳಿಂದಲೂ ಅನೇಕ ಹೆಣ್ಣುಮಕ್ಕಳು ನರಳಿದ್ದು ಸುದ್ದಿಯಾಗಿದೆ. ಅಸಂಘಟಿತ ಮಹಿಳಾ ಕಾರ್ಮಿಕರನ್ನು ತಕ್ಷಣವೇ ಸಂಘಟಿಸುವ ಕೆಲಸ ಆಗಬೇಕಿದೆ. ಅವರು ಸದ್ಯ ಅನುಭವಿಸುತ್ತಿ ರುವ ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳಿಗೆ ಸರಕಾರದಿಂದ ಪರಿಹಾರವನ್ನು, ಸಹಾಯಧನವನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಆರೋಗ್ಯ, ವಸತಿಯಂತಹ ಬಹು ಮುಖ್ಯ ಸಮಸ್ಯೆಗಳಿಂದಲೂ ಈ ಹೆಣ್ಣುಮಕ್ಕಳು ಧೃತಿಗೆಟ್ಟಿದ್ದಾರೆ. ಅವರಿಗೆ ಈ ಸೌಲಭ್ಯಗಳನ್ನು ತಕ್ಷಣಕ್ಕೆ ಒದಗಿಸಿ ಅವರ ಬೆಂಬಲಕ್ಕೆ ನಿಲ್ಲುವ ಪ್ರಯತ್ನ ಸಮಾಜದಿಂದ ಆಗಬೇಕಿದೆ. ಜೊತೆಗೆ ಇವರಂತಹ ಅಸಂಘಟಿತ ಮಹಿಳೆಯರ ಸಮಸ್ಯೆಗಳನ್ನೂ ಕಾರ್ಮಿಕ ಇಲಾಖೆ ವಿಶೇಷ ರೀತಿಯಲ್ಲಿ ಪರಿಗಣಿಸಿ ತಕ್ಷಣವೇ ಬೆಂಬಲ ನೀಡಿದರೆ ಮಾತ್ರ ಇವರು ಬೀದಿಗೆ ಬೀಳುವುದು ತಪ್ಪಬಹುದಷ್ಟೇ. ಇವರ ಸ್ಥಿತಿ ಶಾಶ್ವತವಾಗಿ ಸುಧಾರಿಸುವಂತಾಗುವುದಕ್ಕೆ ಗಮನಹರಿಸಲು ಇದೊಂದು ತುರ್ತು ಸಂದರ್ಭ. ಪ್ರಬಲ ಕಾನೂನುಗಳನ್ನೂ, ಇವರ ಪರವಾದ ಸಂರಕ್ಷಣೆಯ ನೀತಿ ನಿಯಮಗಳನ್ನೂ ತಕ್ಷಣವೇ ರೂಪಿಸುವುದಕ್ಕೆ ಪ್ರಜ್ಞಾವಂತ ಸಮಾಜ, ಪ್ರಭುತ್ವದ ಮೇಲೆ ಒತ್ತಡ ಹೇರಬೇಕಿದೆ. ಒಟ್ಟಾರೆ ಈ ಅಸಂಘಟಿತ ಮಹಿಳಾ ಕಾರ್ಮಿಕರ ಬದುಕು ಸದ್ಯದ ಕೊರೋನ ಸೋಂಕಿನ ಲಾಕ್‌ಡೌನ್ ಸಂದರ್ಭದಲ್ಲಿ ವಿಪರೀತ ಜರ್ಜರಿತಗೊಂಡಿದೆ. ಸರಕಾರ ಮತ್ತು ಜವಾಬ್ದಾರಿಯುತ ನಾಗರಿಕರು ಸಾಧ್ಯವಾಗುವ ರೀತಿಯಲ್ಲೆಲ್ಲಾ ತಕ್ಷಣವೇ ಇವರ ಬೆಂಬಲಕ್ಕೆ ನಿಲ್ಲಬೇಕಿದೆ.

Writer - ರೂಪ ಹಾಸನ

contributor

Editor - ರೂಪ ಹಾಸನ

contributor

Similar News