ಪುಟಿನ್ ಪ್ರಳಯಾಂತಕ ರಾಜಕಾರಣ

Update: 2020-06-27 10:13 GMT

ಪುಟಿನ್ ವಿರುದ್ಧ ಮಾಸ್ಕೋದಲ್ಲಿ ಒಂದು ದೊಡ್ಡ ರ‍್ಯಾಲಿ ನಡೆಯಿತೆಂದುಕೊಳ್ಳಿ, ಮಾರನೇ ದಿನ ಅದಕ್ಕಿಂತ ದೊಡ್ಡ ರ‍್ಯಾಲಿ ಪುಟಿನ್ ಪರವಾಗಿಯೂ ನಡೆಯುತ್ತಿತ್ತು. ರ‍್ಯಾಲಿಗೆ ಬಂದವರಿಗೆ ಒಂದೋ ದುಡ್ಡು ಕೊಟ್ಟು ಕರೆಸಲಾಗುತ್ತಿತ್ತು ಅಥವಾ ಯಾವುದೋ ಸಾಂಸ್ಕೃತಿಕ ಮೇಳದ ಹೆಸರಲ್ಲಿ ಸೇರಿಸಲಾಗುತ್ತಿತ್ತು. ಪುಟಿನ್ ಅವಧಿಯಲ್ಲಿ ಪತ್ರಕರ್ತರ ಮೇಲೆ ನಡೆದ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ಪುಟಿನ್ ಜನ್ಮದಿನದಂದೇ ಪತ್ರಕರ್ತೆಯೊಬ್ಬರನ್ನು ದಾರುಣವಾಗಿ ಕೊಲ್ಲಲಾಯಿತು. ಪತ್ರಕರ್ತರು, ಜನಸಾಮಾನ್ಯರು ಪ್ರತಿಭಟಿಸಿದರು. ಏನೂ ಪ್ರಯೋಜನವಾಗಲಿಲ್ಲ. ಪುಟಿನ್ ತನ್ನ ಪರವಾದ ಮಾಧ್ಯಮಗಳನ್ನು ಸಾಕಿಕೊಂಡಿದ್ದಲ್ಲದೆ ವಿರೋಧಿ ಮಾಧ್ಯಮಗಳನ್ನು ಹತ್ತಿಕ್ಕಿದರು. ಪುಟಿನ್ ವಿರೋಧಿಸುವವರನ್ನು ಅಮೆರಿಕ ಪರವಾದ ಏಜೆಂಟರು ಎಂದು ನಿಂದಿಸಲಾಯಿತು. ಮೋದಿ ವಿರೋಧಿಗಳನ್ನು ಪಾಕಿಸ್ತಾನಕ್ಕೆ ಕಳಿಸಿ ಎಂದು ನಮ್ಮಲ್ಲಿ ಹೇಳುವುದಿಲ್ಲವೇ, ಥೇಟ್ ಹಾಗೆಯೇ.


ನಾವು ಪ್ರತಿನಿತ್ಯ ಫೇಕ್ ನ್ಯೂಸ್ ಗಳ ಜತೆ ಬಡಿದಾಡುತ್ತಿದ್ದೇವೆ. ವಡ್ನಾಗರ್ ರೈಲ್ವೆ ಸ್ಟೇಷನ್, ಚಿನ್ನದ ರಸ್ತೆಯಿಂದ ಹಿಡಿದು ನಿನ್ನೆ ಮೊನ್ನೆ ಶುರುವಾದ ರಾಹುಲ್ ಗಾಂಧಿ-ಚೀನಾ ಒಪ್ಪಂದದವರೆಗೆ ಪ್ರತಿನಿತ್ಯ ಒಂದಲ್ಲ ಒಂದು ಫೇಕ್ ನ್ಯೂಸನ್ನು ಸುಳ್ಳು ಎಂದು ಹೇಳಲು ಪರದಾಡುತ್ತಿರುತ್ತೇವೆ. ಐಟಿ ಸೆಲ್ಲು ಹರಡಿದ್ದು ಫೇಕು ಅನ್ನೋದು ಸಾವಿರದಲ್ಲಿ ಒಬ್ಬರಿಗೆ ಗೊತ್ತಾದರೆ ಮಿಕ್ಕ 999 ಜನರು ಅದನ್ನು ನಂಬಿರುತ್ತಾರೆ. ಅಂದಹಾಗೆ ಇಡೀ ಜಗತ್ತಿನಲ್ಲಿ ಫೇಕ್ ನ್ಯೂಸ್ ಗಳ ಜನಕ ಯಾರು ಗೊತ್ತಾ? ವ್ಲಾದಿಮಿರ್ ಪುಟಿನ್! ರಶ್ಯದ ಅಧ್ಯಕ್ಷ. ಅಮೆರಿಕದ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲಲು ಕಾರಣ ಇದೇ ವ್ಲಾದಿಮಿರ್ ಪುಟಿನ್. ಸರ್ವಾಧಿಕಾರ, ಭ್ರಷ್ಟಾಚಾರ, ವಿರೋಧಿಗಳ ಮೇಲೆ ದೌರ್ಜನ್ಯ, ಅಧಿಕಾರ ದಾಹ, ಸುಳ್ಳು-ಕಪಟ ಎಲ್ಲ ಹೊದ್ದ ಜಾಗತಿಕ ನಾಯಕರಲ್ಲಿ ಪುಟಿನ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆೆ.

ರಶ್ಯದ ಸೀಕ್ರೆಟ್ ಪೊಲೀಸ್ ಏಜೆನ್ಸಿ ಕೆಜಿಬಿಯಲ್ಲಿ ಅಧಿಕಾರಿಯಾಗಿದ್ದ ಪುಟಿನ್ ಯಶೋಗಾಥೆ ಅವರ ಮೂಲಸ್ಥಾನ ಲೆನಿನ್ ಗ್ರಾದ್ ನಗರದಿಂದಲೇ ಶುರುವಾಗುತ್ತದೆ. ಕೆಜಿಬಿಯಲ್ಲಿ ಇದ್ದಾಗಲೂ ಪುಟಿನ್ ಅಂತಹ ರೆಪ್ಯುಟೇಷನ್ ಹೊಂದಿರಲಿಲ್ಲ. ಅಂಡರ್ ಕವರ್ ಏಜೆಂಟರಾಗಿ ಜರ್ಮನಿಯಲ್ಲಿ ಕೆಲಕಾಲ ಕೆಲಸ ಮಾಡಿದ ಪುಟಿನ್ ಬರೀ ಪೇಪರ್ ಕಟ್ಟಿಂಗ್ ಕಳಿಸಿದ್ದೇ ಸಾಧನೆ ಎಂದು ಅವರ ಸಹೋದ್ಯೋಗಿಗಳು ಹೇಳುತ್ತಾರೆ. ಪುಟಿನ್ ಕೆಜಿಬಿಯಿಂದ ಹೊರ ಬಂದು ಶಾರ್ಟ್‌ಕಟ್ ಗಳನ್ನು ಹುಡುಕಿಕೊಂಡು ರಾಜಕೀಯವಾಗಿ ಮೇಲೆ ಬರುತ್ತಾರೆೆ. ಸೋವಿಯತ್ ಯೂನಿಯನ್ ಪತನದ ನಂತರ ರಶ್ಯವನ್ನು ಮುನ್ನಡೆಸಿದ್ದ ಬೋರಿಸ್ ಎಲ್ಸ್ಟಿನ್ ಗೆ ನಿಕಟನಾಗುತ್ತಾರೆೆ. ಎಲ್ಸ್ಟಿನ್ ಪ್ರಧಾನಮಂತ್ರಿ ಹುದ್ದೆಗೆ ಪುಟಿನ್ ರನ್ನು ತಂದು ನಿಲ್ಲಿಸಿದಾಗ ಇಡೀ ದೇಶವೇ ಬೆರಗಾಗಿತ್ತು. ಯಾಕೆಂದರೆ ಬಹುಪಾಲು ಜನರು ಇವರ ಹೆಸರು ಕೇಳಿಯೇ ಇರಲಿಲ್ಲ. ಎಲ್ಸ್ಟಿನ್ ಅಲ್ಲಿಗೆ ನಿಲ್ಲದೆ, ಪುಟಿನ್ ರನ್ನು ತನ್ನ ಉತ್ತರಾಧಿಕಾರಿಯೆಂದು ಘೋಷಿಸಿದರು. ಪುಟಿನ್ ರಶ್ಯ ಅಧ್ಯಕ್ಷರಾದ ಕೂಡಲೇ ಮಾಡಿದ ಮೊದಲ ಕೆಲಸ ಎಲ್ಸ್ಟಿನ್ ಕಾಲದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಿದ್ದು.

ಪುಟಿನ್ ಎರಡು ಸತತ ಅವಧಿಗೆ ಅಧ್ಯಕ್ಷರಾಗುತ್ತಾರೆೆ. ರಶ್ಯದ ಸಂವಿಧಾನದ ಪ್ರಕಾರ ಮೂರನೇ ಅವಧಿಗೆ ಅಧ್ಯಕ್ಷ ಸ್ಥಾನ ಏರುವಂತಿರಲಿಲ್ಲ. ಪುಟಿನ್ ತನ್ನ ನಿಷ್ಠಾವಂತ ಡಿಮಿಟ್ರಿ ಮೆಡ್ವೆಡೆವ್ ಎಂಬಾವರನ್ನು ಅಧ್ಯಕ್ಷ ಗಾದಿಗೆ ಏರಿಸಿ, ತಾನು ಪ್ರಧಾನಿಯಾಗಿಬಿಡುತ್ತಾರೆ! ನರೇಂದ್ರ ಮೋದಿ ಮುಂದೊಂದು ದಿನ ಅಮಿತ್ ಶಾ ಕ್ಯಾಬಿನೆಟ್ ನಲ್ಲಿ ಮಂತ್ರಿಯಾದರೆ ಹೇಗಿರುತ್ತೆ ಹೇಳಿ? ಪುಟಿನ್ ಮಾಡಿದ್ದು ಅದನ್ನೆ. ನಂತರ ಮೆಡ್ವೆಡೆವ್ ತನ್ನ ನಂತರದ ಅಧ್ಯಕ್ಷ ಪಟ್ಟಕ್ಕೆ ಮತ್ತೆ ಪುಟಿನ್ ಹೆಸರನ್ನೇ ತರುತ್ತಾರೆೆ. ಪುಟಿನ್ ಮತ್ತೆ ಅಧ್ಯಕ್ಷರಾಗುತ್ತಾನೆ. ಈ ರೀತಿ ಅಧಿಕಾರ ಹಸ್ತಾಂತರಿಸುವ ಒಪ್ಪಂದ ಮೊದಲೇ ನಮ್ಮ ನಡುವೆ ಆಗಿತ್ತು ಎಂದು ಬಹಿರಂಗವಾಗಿಯೇ ಹೇಳಿದ ಈ ರಶ್ಯದ ಪನ್ನೀರ್ ಸೆಲ್ವಂ!

ಪುಟಿನ್ ಮೂರನೇ ಅವಧಿಗೆ ರಶ್ಯದ ಅಧ್ಯಕ್ಷರಾದಮೇಲೆ ನಾಲ್ಕನೇ ಅವಧಿಗೂ ಆಯ್ಕೆಯಾಗುತ್ತಾರೆೆ. ಈಗ ಮತ್ತೆ ಎರಡು ಸತತ ಅವಧಿಗಳಿಗೆ ಅಧ್ಯಕ್ಷರಾಗಿರುವುದರಿಂದ ಮೂರನೇ ಅವಧಿಗೆ 2024ರಲ್ಲಿ ಅಧ್ಯಕ್ಷರಾಗುವಂತಿಲ್ಲ. ಆದರೆ ಈ ದೊರೆ ಅಷ್ಟು ಸುಲಭವಾಗಿ ಅಧಿಕಾರದಿಂದ ದೂರ ಉಳಿಯುತ್ತಾರೆ ಎಂದು ಜಗತ್ತು ನಂಬುವುದೇ ಇಲ್ಲ. ದಯವಿಟ್ಟು ನಂಬಿ, ಪುಟಿನ್ ನಿವೃತ್ತರಾಗೋದಿಲ್ಲ!

ರಶ್ಯದಲ್ಲಿ ಪುಟಿನ್ ತಾನು ಅಧಿಕಾರಕ್ಕೆ ಬಂದ ನಂತರ ಮಾಡಿದ್ದು, ಇಡೀ ರಶ್ಯ ರಾಜಕಾರಣವನ್ನು ತನ್ನ ಹತೋಟಿಗೆ ತಂದುಕೊಂಡಿದ್ದು. ಭಿನ್ನ ಧ್ವನಿಗಳನ್ನು ಅವರು ಸಹಿಸಿಕೊಳ್ಳಲೇ ಇಲ್ಲ. ಪುಟಿನ್‌ರ ಭ್ರಷ್ಟಾಚಾರ ಮತ್ತು ಸರ್ವಾಧಿಕಾರದ ವಿರುದ್ಧದ ಧ್ವನಿಗಳನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು. ಪುಟಿನ್ ವಿರುದ್ಧ ಮಾಸ್ಕೋದಲ್ಲಿ ಒಂದು ದೊಡ್ಡರ? ರ್ಯಾಲಿ ನಡೆಯಿತೆಂದುಕೊಳ್ಳಿ, ಮಾರನೇ ದಿನ ಅದಕ್ಕಿಂತ ದೊಡ್ಡ ರ್ಯಾಲಿ ಪುಟಿನ್ ಪರವಾಗಿ ನಡೆಯುತ್ತಿತ್ತು.?ರ್ಯಾಲಿಗೆ ಬಂದವರಿಗೆ ಒಂದೋ ದುಡ್ಡು ಕೊಟ್ಟು ಕರೆಸಲಾಗುತ್ತಿತ್ತು ಅಥವಾ ಯಾವುದೋ ಸಾಂಸ್ಕೃತಿಕ ಮೇಳದ ಹೆಸರಲ್ಲಿ ಸೇರಿಸಲಾಗುತ್ತಿತ್ತು. ಪುಟಿನ್ ಅವಧಿಯಲ್ಲಿ ಪತ್ರಕರ್ತರ ಮೇಲೆ ನಡೆದ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ಪುಟಿನ್ ಜನ್ಮದಿನದಂದೇ ಪತ್ರಕರ್ತೆಯೊಬ್ಬರನ್ನು ದಾರುಣವಾಗಿ ಕೊಲ್ಲಲಾಯಿತು. ಪತ್ರಕರ್ತರು, ಜನಸಾಮಾನ್ಯರು ಪ್ರತಿಭಟಿಸಿದರು. ಏನೂ ಪ್ರಯೋಜನವಾಗಲಿಲ್ಲ. ಪುಟಿನ್ ತನ್ನ ಪರವಾದ ಮಾಧ್ಯಮಗಳನ್ನು ಸಾಕಿಕೊಂಡಿದ್ದಲ್ಲದೆ ವಿರೋಧಿ ಮಾಧ್ಯಮಗಳನ್ನು ಹತ್ತಿಕ್ಕಿದರು. ಪುಟಿನ್ ವಿರೋಧಿಸುವವರನ್ನು ಅಮೆರಿಕ ಪರವಾದ ಏಜೆಂಟರು ಎಂದು ನಿಂದಿಸಲಾಯಿತು. ಮೋದಿ ವಿರೋಧಿಗಳನ್ನು ಪಾಕಿಸ್ತಾನಕ್ಕೆ ಕಳಿಸಿ ಎಂದು ನಮ್ಮಲ್ಲಿ ಹೇಳುವುದಿಲ್ಲವೇ, ಥೇಟ್ ಹಾಗೆಯೇ.

ಮೊನ್ನೆ ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಸೈನಿಕರು ದಾರುಣವಾಗಿ ಚೀನಾ ಯೋಧರಿಂದ ಹತ್ಯೆಗೀಡಾದರಲ್ಲ, ಆ ನಂತರ ಸಿ ಓಟರ್ ಒಂದು ಸಮೀಕ್ಷೆ ನಡೆಸಿತು. ಮೋದಿ ಸರಕಾರ ಚೀನಾ ಸಂಘರ್ಷವನ್ನು ಸಮರ್ಥವಾಗಿ ಎದುರಿಸಿದೆ ಎಂದು ಶೇ. 73ಕ್ಕೂ ಹೆಚ್ಚು ಭಾರತೀಯರು ಅಭಿಪ್ರಾಯಪಡುತ್ತಾರೆ ಎಂದು ಹೇಳುತ್ತದೆ ಸಮೀಕ್ಷೆ! ಒಂದು ತಮಾಷೆೆಯ ಕಥೆ ಕೇಳಿ. 2002ರ ಅಕ್ಟೋಬರ್ ನಲ್ಲಿ ಮಾಸ್ಕೋದ ಥಿಯೇಟರ್ ಒಂದರಲ್ಲಿ ನೂರಾ ಮೂವತ್ತು ಒತ್ತೆಯಾಳುಗಳು ದುಷ್ಕರ್ಮಿಗಳಿಂದ ಹತರಾದರು. ರಶ್ಯದ ಇತಿಹಾಸದಲ್ಲಿ ನಡೆದ ಭೀಕರ ದುಷ್ಕೃತ್ಯಗಳಲ್ಲಿ ಇದೂ ಕೂಡ ಒಂದು. ವ್ಲಾದಿಮಿರ್ ಪುಟಿನ್ ಜನಪ್ರಿಯತೆಯನ್ನು ಇದು ಸರ್ವನಾಶ ಮಾಡಲಿದೆ ಎಂದು ರಶ್ಯ ಮತ್ತು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಬಣ್ಣಿಸಿದ್ದವು. ಆದರೆ ಸಮೀಕ್ಷೆಯೊಂದರ ಪ್ರಕಾರ ಶೇ. 83 ರಷ್ಟು ಮಂದಿ ರಶ್ಯನ್ನರು ಈ ಘಟನೆಯನ್ನು ಪುಟಿನ್ ಸಮರ್ಥವಾಗಿ ನಿಭಾಯಿಸಿದ್ದಾರೆಂದು ಷರಾ ಬರೆದಿದ್ದರು. ನಿಮಗೆ ಈಗ ಪುಲ್ವಾಮಾ ಕೂಡ ನೆನಪಾಗಿರಬೇಕಲ್ಲವೇ? ಆಲ್ ರೈಟ್ ಮುಂದಕ್ಕೆಹೋಗೋಣ.

ಪುಟಿನ್ ನೆರೆಯ ಉಕ್ರೇನ್ ರಾಜಕಾರಣದಲ್ಲಿ ಮೂಗು ತೂರಿಸಿದರು. ಉಕ್ರೇನ್ ಒಳಗೆ ರಶ್ಯ ಸೈನ್ಯ ನುಗ್ಗಿತು. ಉಕ್ರೇನ್‌ನಲ್ಲಿ ರಶ್ಯ ನಡೆಸಿದ ಕಾರ್ಯಾಚರಣೆಯನ್ನು ಅಮೆರಿಕ ಮತ್ತು ಯೂರೋಪಿಯನ್ ರಾಷ್ಟ್ರಗಳು ಖಂಡಿಸಿದ್ದು ಮಾತ್ರವಲ್ಲ, ರಶ್ಯ ಮೇಲೆ ಆರ್ಥಿಕ ದಿಗ್ಬಂಧನ ಹೇರಿದವು. ಚೆಚನ್ಯದಲ್ಲಿ ನಡೆಯುತ್ತಿದ್ದ ಆಡಳಿತ ವಿರೋಧಿ ದಂಗೆ ನಿಯಂತ್ರಣಕ್ಕೆ ರಷ್ಯಾ ಸೈನ್ಯ ಮುಂದಾಯಿತು. ಬಂಡುಕೋರರನ್ನು ಬಗ್ಗುಬಡಿದ ರಶ್ಯ, ಚೆಚನ್ಯವನ್ನು ರಶ್ಯದ ಭಾಗ ಎಂದು ಘೋಷಿಸಿಕೊಂಡಿತು. ಸಿರಿಯಾದಲ್ಲೂ ಕಾರ್ಯಾಚರಣೆ ನಡೆಸುತ್ತಿದ್ದ ಭಯೋತ್ಪಾದಕರನ್ನು ಎದುರಿಸಲಾಗದೆ ಅಲ್ಲಿನ ಸರ್ಕಾರ ರಶ್ಯ ಮಧ್ಯಪ್ರವೇಶಕ್ಕೆ ಕೋರಿತು. ರಶ್ಯ ಸೈನ್ಯ ಸಿರಿಯಾದೊಳಗೆ ನುಗ್ಗಿತು. ಸದ್ಯಕ್ಕೆ ರಶ್ಯ ಸೈನ್ಯದ ಕಾರ್ಯಾಚರಣೆ ಮುಗಿದಿದ್ದರೂ ಈಗಲೂ ಸಿರಿಯಾ ರಶ್ಯ ಅಂಕೆಯಲ್ಲೇ ಇದೆ.

ಯಾವಾಗ ರಶ್ಯದ್ಯ ಮೇಲೆ ಅಮೆರಿಕ ದಿಗ್ಬಂಧನ ಹೂಡಿತೋ, ಪುಟಿನ್ ಅಂದಿನ ಒಬಾಮಾ ಆಡಳಿತದ ಮೇಲೆ ಕೆಂಗಣ್ಣು ಬೀರಿದರು. ಹಿಲರಿ ಕ್ಲಿಂಟನ್ ಮೇಲೆ ದ್ವೇಷ ಬೆಳೆಸಿಕೊಂಡ. ಲಿಬಿಯಾದಲ್ಲಿ ಗಡಾಫಿ ಸರ್ವಾಧಿಕಾರ ಅಂತ್ಯಗೊಂಡನಂತರ ಹಿಲರಿ ಕ್ಲಿಂಟನ್ ನಮ್ಮ ಮುಂದಿನ ಗುರಿ ಪುಟಿನ್ ಎಂದು ಹೇಳಿದ್ದರಂತೆ! ಅದು ಪುಟಿನ್ ಇನ್ನಷ್ಟು ಕೆರಳಲು ಕಾರಣವಾಯಿತು. ನಂತರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಂದಾಗ ಹಿಲರಿ ಕ್ಲಿಂಟನ್ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದಾಗ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿತು.

ಒಂದು ಕಡೆ ರಶ್ಯ ಮೇಲೆ ಬುಸುಗುಟ್ಟುತ್ತಿದ್ದ ಹಿಲರಿ ಕ್ಲಿಂಟನ್ ಸೋಲಬೇಕು. ಇನ್ನೊಂದೆಡೆ ರಶ್ಯ ನಾಯಕತ್ವಕ್ಕೆ ಪೂರಕವಾಗಿ ಕೆಲಸ ಮಾಡಬಲ್ಲ ನಾಯಕನೂ ಅಧ್ಯಕ್ಷನಾಗಬೇಕು. ಡೊನಾಲ್ಡ್ ಟ್ರಂಪ್ ಗಿಂತ ಒಳ್ಳೆಯ ಆಯ್ಕೆ ಇರಲು ಸಾಧ್ಯವಿತ್ತೆ? ಪುಟಿನ್ ಇಡೀ ಚುನಾವಣೆಯಲ್ಲಿ ಟ್ರಂಪ್ ಬೆನ್ನಿಗೆ ನಿಂತುಬಿಟ್ಟರು.

ಅಮೆರಿಕದ ಚುನಾವಣೆಯಲ್ಲಿ ರಶ್ಯ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಪುಟಿನ್ ಮೂಗಿನ ನೇರಕ್ಕೆ ರಶ್ಯದ ಸೀಕ್ರೆಟ್ ಏಜೆನ್ಸಿಗಳು, ತಂತ್ರಜ್ಞರು, ಸರಕಾರಿ ಅಧಿಕಾರಿಗಳು ಹೆಣೆದ ಜಾಲ ಸಾಮಾನ್ಯದ್ದಲ್ಲ. ಅದು ಹತ್ತು ಹಾಲಿವುಡ್ ಸಿನೆಮಾಗಳಿಗೆ ಆಗಬಹುದಾದ ಸರಕು! ಟ್ರಂಪ್ ಮಗನೇ ರಷ್ಯಾ ಅಧಿಕಾರಿಗಳ ಜತೆ ಸಭೆ ನಡೆಸಿದ ವೀಡಿಯೊ ಹೊರಬಂದಾಗ ಏನೇನಾಗಿರಬಹುದೆಂಬ ಸಣ್ಣ ಅಂದಾಜು ಜಗತ್ತಿಗೆ ಸಿಕ್ಕಿತು. ಆದರೆ ಆಳದಲ್ಲಿ ಪುಟಿನ್ ದೊಡ್ಡ ಷಡ್ಯಂತ್ರವನ್ನೇ ಹೂಡಿದ್ದರು. ಹಿಲರಿ ಕ್ಲಿಂಟನ್ ಪರಾಭವಗೊಂಡರು, ಟ್ರಂಪ್ ಗೆದ್ದೇ ಬಿಟ್ಟರು. ಇದೆಲ್ಲ ಪುಟಿನ್‌ಗೆ ಹೇಗೆ ಸಾಧ್ಯವಾಯಿತು ಅನ್ನೋದು ರೋಚಕ ಕಥೆ. ಅದನ್ನು ಮತ್ತೆಂದಾದರೂ ಬರೆದೇನು.

ನಾವು ಇಂಡಿಯಾದಲ್ಲಿ ಒಬ್ಬ ರಾಜಕಾರಣಿಯನ್ನು ಚಾಣಕ್ಯ ಎನ್ನುತ್ತೇವಲ್ಲ, ಅವರಂತಹ ಹತ್ತು ಜನರನ್ನು ಒಟ್ಟಿಗೆ ಸೇರಿಸಿದರೆ ಉದ್ಭವಿಸುವವನೇ ಈ ಪುಟಿನ್. ಈತ ಕಮ್ಯುನಿಸ್ಟನಲ್ಲ (ಕಮ್ಯುನಿಸಂ ಪ್ರಸ್ತುತವಲ್ಲ ಎಂಬುದು ಇವನ ಹೇಳಿಕೆ) ಪ್ರಜಾಪ್ರಭುತ್ವವಾದಿಯೂ ಅಲ್ಲ. ಇವರ ಪಕ್ಷ ಪ್ರತಿ ಚುನಾವಣೆಯಲ್ಲೂ ರಾಜಾರೋಷವಾಗಿ ರಿಗ್ಗಿಂಗ್ ನಡೆಸುತ್ತದೆ. ಹಾಗಂತ ಇವರು ಘೋಷಿತ ಸರ್ವಾಧಿಕಾರಿಯೂ ಅಲ್ಲ. ತನ್ನ ದೇಶದ ಸಂವಿಧಾನವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವುದು ಇವರಿಗೆ ಗೊತ್ತು. ಯಾವ ಲೇಬಲ್ಲಿಗೂ ಸಿಗದ ಪುಟಿನ್ ಒಬ್ಬ ಪುಟಿನ್ ಅಷ್ಟೆ. ಅವರಿಗೆ ಯಾವ ಹೋಲಿಕೆಯೂ ಇಲ್ಲ.

ಹಾಗಾದರೆ ಪುಟಿನ್ ಏನು ಎಂದು ನೀವು ಕೇಳಬಹುದು. ರಶ್ಯನ್ನರ ಪಾಲಿಗೆ ಅವರು ಒಬ್ಬ ರಾಷ್ಟ್ರವಾದಿ! ಪಾಪ್ಯುಲಿಸ್ಟ್ ರಾಜಕಾರಣದ ಬಗ್ಗೆ ಜಗತ್ತಿನಲ್ಲಿ ಯಾರು ಏನೇ ಬರೆದರೂ ಪುಟಿನ್ ಹೆಸರು ಬರೆಯದೇ ಇರಲು ಸಾಧ್ಯವಿಲ್ಲ.

Writer - ದಿನೇಶ್ ಕುಮಾರ್, ಬೆಂಗಳೂರು

contributor

Editor - ದಿನೇಶ್ ಕುಮಾರ್, ಬೆಂಗಳೂರು

contributor

Similar News