ಕೈಮುಗಿದು ಕುಟುಂಬದ ಕ್ಷಮೆಯಾಚಿಸಿದ ಬಿಬಿಎಂಪಿ ಆಯುಕ್ತ

Update: 2020-07-04 12:52 GMT

ಬೆಂಗಳೂರು: ಆ್ಯಂಬುಲೆನ್ಸ್ ಗಾಗಿ ಸುಮಾರು ಎರಡು ಗಂಟೆಗಳ ಕಾಲ ಕಾದು ಕೊನೆಗೆ ರಸ್ತೆ ಬದಿ ಕುಸಿದು ಬಿದ್ದು ಮೃತಪಟ್ಟಿದ್ದ ಕೋವಿಡ್ 19 ಸೋಂಕಿತರೊಬ್ಬರ ಕುಟುಂಬದೊಂದಿಗೆ ಬಿಬಿಎಂಪಿ ಆಯುಕ್ತರು ಬೇಷರತ್ ಕ್ಷಮೆ ಯಾಚಿಸಿದ್ದಾರೆ.

ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲ್ ಕುಮಾರ್ ಅವರು ಬಿಬಿಎಂಪಿ ಪರವಾಗಿ  55 ವರ್ಷದ ವ್ಯಕ್ತಿಯ ಕುಟುಂಬದಿಂದ ಕ್ಷಮೆ ಕೋರಿದರಲ್ಲದೆ, ಬಿಬಿಎಂಪಿ ಸಿಬ್ಬಂದಿ ಈ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಬಹುದಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ಜತೆ ಕೆಲ ಫೋಟೋಗಳನ್ನೂ ಅವರು ಶೇರ್ ಮಾಡಿದ್ದು ಕೋವಿಡ್ ರೋಗಿಯ ಕುಟುಂಬ ಸದಸ್ಯರೆದುರು ಕೈಮುಗಿದು ಕ್ಷಮೆ ಕೇಳುತ್ತಿರುವುದು ಕಾಣಿಸುತ್ತದೆ.

ಆ ವ್ಯಕ್ತಿ ಉಸಿರಾಟದ ಸಮಸ್ಯೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದ್ದು, ವೈದ್ಯಕೀಯ ವರದಿ ಪಾಸಿಟಿವ್ ಬಂದ ನಂತರ ಅವರ ಪತ್ನಿ ಆಸ್ಪತ್ರೆಗೆ ಕರೆ ಮಾಡಿ ಆ್ಯಂಬುಲೆನ್ಸ್ ಕಳುಹಿಸುವಂತೆ ಮನವಿ ಮಾಡಿದ್ದರು. ಆದರೆ ಆ್ಯಂಬುಲೆನ್ಸ್ ಬಾರದೇ ಇದ್ದಾಗ ಆಟೋದಲ್ಲಿ ಆಸ್ಪತ್ರೆಗೆ ತೆರಳಲು ನಿರ್ಧರಿಸಿ ಮನೆಯಿಂದ ಹೊರಕ್ಕೆ ಬರುವಷ್ಟರಲ್ಲಿ ಆ ವ್ಯಕ್ತಿ ಕುಸಿದು ಸಾವನ್ನಪ್ಪಿದ್ದರು.

ಈ ಘಟನೆ ಕುರಿತು ತನಿಖೆಗೆ ಆದೇಶಿಸುವುದಾಗಿ ಬಿಬಿಎಂಪಿ ಆಯುಕ್ತರು  ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News