ಕೊರೋನ ಚಿಕಿತ್ಸೆಗೆ ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದ ರಾಜ್ಯ ಸರಕಾರ

Update: 2020-07-04 13:18 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.4: ರಾಜಧಾನಿಯಲ್ಲಿಯಲ್ಲಿ ದಿನನಿತ್ಯ ಕೊರೋನ ಸೋಂಕಿತ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರಕಾರ, ನಗರದ 73 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ನೀಡುವಂತೆ ಆದೇಶ ನೀಡಿದೆ.

ಈ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆಗಳನ್ನು ಕೊರೋನ ರೋಗಿಗಳಿಗೆ ಮೀಸಲಿಡುವ ಜೊತೆಗೆ, ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ ಎಂದು ರಾಜ್ಯ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳೂ ಸೇರಿದಂತೆ, 73 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಬಿಡುಗಡೆ ಮಾಡಿ, ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ, ತನ್ನ ಆದೇಶದಲ್ಲಿ ಸೂಚಿಸಿದೆ. ಕೇಂದ್ರೀಕೃತ ಹಂಚಿಕೆಯ ಮೂಲಕ ಕೊರೋನ ಸೋಂಕಿತರನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ರೋಗಿಗಳಿಗೆ ಅಗತ್ಯವಿದ್ದರೆ, ಸರಕಾರ ನಿಗದಿಪಡಿಸಿರುವ ದರದಲ್ಲಿ ರಕ್ತದ ವರದಿ ಸಮೇತ ಹೋಗಿ, ಈ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಪ್ರಯೋಗಾಲಯದ ವರದಿ ಇಲ್ಲದಿದ್ದರೂ, ತೀವ್ರ ಅನಾರೋಗ್ಯಕ್ಕೆ ಈಡಾದ ರೋಗಿಗಳಿಗೆ ಈ ಆಸ್ಪತ್ರೆಗಳು ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ. ಕೊರೋನ ಸೋಂಕಿತರಿಗೆ ಯಾವುದೇ ಕಾರಣಕ್ಕೂ ಅನಾನುಕೂಲವಾಗಬಾರದು. ಹಾಗೊಂದು ವೇಳೆ ಅನಾನುಕೂಲವಾದರೆ, ನೋಡೆಲ್ ಅಧಿಕಾರಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ನಗರದ ಎಂ.ಎಸ್. ರಾಮಯ್ಯ, ಬಿಜಿಎಸ್, ಅಪೋಲೊ, ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ, ಕೊಲಂಬಿಯಾ ಏಷ್ಯಾ, ಕಿಮ್ಸ್, ಮಲ್ಲಿಗೆ ಆಸ್ಪತ್ರೆ, ಮಣಿಪಾಲ್, ಸೆಂಟ್ ಜಾನ್ಸ್, ಸ್ಪರ್ಶ್, ವಾಸವಿ, ವೈದೇಹಿ ಆಸ್ಪತ್ರೆ ಸೇರಿದಂತೆ 73 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ರಾಜ್ಯ ಸರಕಾರ ಸೂಚಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News