ಬೆಂಗಳೂರು ತೊರೆಯಬೇಡಿ: ನಾಗರಿಕರಿಗೆ ಗೃಹ ಸಚಿವ ಬೊಮ್ಮಾಯಿ ಮನವಿ

Update: 2020-07-05 12:13 GMT

ಬೆಂಗಳೂರು, ಜು. 5: ಕೊರೋನ ವೈರಸ್ ಸೋಂಕು ಹರಡುತ್ತಿರುವುದು ನಿಯಂತ್ರಿಸಲು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬೆಂಗಳೂರಿನ ನಾಗರಿಕರು ಯಾವುದೇ ಕಾರಣಕ್ಕೂ ಆತಂಕಪಡುವುದು ಬೇಡ ಎಂದು ಗೃಯ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಅಭಯ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿಯೂ ಬೆಂಗಳೂರು ತೊರೆಯುವುದು ಬೇಡ. ಕೊರೋನ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇಲ್ಲ. ಈ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಲಾಕ್‍ಡೌನ್ ಇಲ್ಲ: ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತೆ ಲಾಕ್‍ಡೌನ್ ಮಾಡಲಾಗುತ್ತದೆ ಎಂಬ ಬಗ್ಗೆ ಯಾರಿಗೂ ಸಂಶಯ ಬೇಡ. ಮತ್ತೆ ಲಾಕ್‍ಡೌನ್ ಮಾಡುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿರುವ ಇತರೆ ಜಿಲ್ಲೆಗಳವರು ತಮ್ಮ ಊರುಗಳಿಗೆ ತೆರಳದೆ ಇಲ್ಲೇ ಇರಿ. ಬೆಂಗಳೂರಿನಲ್ಲೇ ಸುರಕ್ಷಿತವಾಗಿರಿ ಎಂದು ಅವರು ಸಲಹೆ ಮಾಡಿದರು.

ಬೆಂಗಳೂರು ನಗರದ ಪ್ರತಿ ವಾರ್ಡ್ ಗೆ ಎರಡರಂತೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಜನ ಸಾಮಾನ್ಯರು ಕೊರೋನ ಸೋಂಕಿಗೆ ಭಯಪಡುವ ಅಗತ್ಯವಿಲ್ಲ. ಎಲ್ಲರೂ ಧೈರ್ಯದಿಂದ ಇರಿ. ನಿಮ್ಮೊಂದಿಗೆ ಸರಕಾರ ಇದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸರಕಾರದ ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News