ಬೆಂಗಳೂರು: ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10 ಸಾವಿರ ಹಾಸಿಗೆಗಳ ವ್ಯವಸ್ಥೆ

Update: 2020-07-05 13:31 GMT

ಬೆಂಗಳೂರು, ಜು. 5: ಮಾರಕ ಕೊರೋನ ಸೋಂಕಿತರಿಗೆ ಹಾಸಿಗೆಗಳ ಕೊರತೆ ಹಿನ್ನೆಲೆಯಲ್ಲಿ ಸಮರೋಪಾದಿ ಕಾರ್ಯಕ್ಕೆ ಮುಂದಾಗಿರುವ ರಾಜ್ಯ ಸರಕಾರ, ಇಲ್ಲಿನ ತುಮಕೂರು ರಸ್ತೆಯ ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೂತನವಾಗಿ 10 ಸಾವಿರ ಹಾಸಿಗೆಗಳ ಕೋವಿಡ್ ಸೋಂಕಿತರ ಆರೈಕೆ ಕೇಂದ್ರ ಸಜ್ಜುಗೊಳಿಸಿದ್ದು, ಈ ಕೇಂದ್ರವು ದೇಶದಲ್ಲೇ ಬೃಹತ್ ಕೋವಿಡ್-19 ಸೋಂಕಿತರ ಆರೈಕೆ ಕೇಂದ್ರವಾಗಲಿದೆ.

ರವಿವಾರ ಬೆಂಗಳೂರು ಹೊರ ವಲಯದ ತುಮಕೂರು ರಸ್ತೆಯಲ್ಲಿರುವ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಸ್.ಆರ್.ವಿಶ್ವನಾಥ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಖುದ್ದು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

10,100 ಹಾಸಿಗೆಯ ವ್ಯವಸ್ಥೆಯನ್ನು ಲಕ್ಷಣ ರಹಿತ ಕೊರೋನ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಮತ್ತು ವಯಸ್ಕರ ಮನರಂಜನೆಗಾಗಿ ಎಲ್‍ಇಡಿ ಪರದೆಗಳಿವೆ. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕಯುಕ್ತ ಹಾಸಿಗೆಗಳ ಪ್ರತ್ಯೇಕ ವಿಭಾಗಗಳಿವೆ. ಅಗತ್ಯ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಲಾಗಿದೆ.

ಆರೈಕೆ ಕೇಂದ್ರದಲ್ಲಿ 150 ನುರಿತ ವೈದ್ಯರು, ಶುಶ್ರೂಷಕರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೆ ಕೊರೋನ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಆಹಾರದ ವ್ಯವಸ್ಥೆ, ಶೌಚಾಲಯ, ಅಗತ್ಯ ಸೇವೆಗಳನ್ನು ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News