ಚೀನಾದೊಂದಿಗೆ ವ್ಯಾಪಾರ ಸಮರ ಭಾರತದ ಆರ್ಥಿಕತೆಯನ್ನು ವರ್ಷಗಳಷ್ಟು ಹಿಂದಕ್ಕೊಯ್ಯಲಿದೆ

Update: 2020-07-05 17:47 GMT

ಹೊಸದಿಲ್ಲಿ,ಜು.5: ಚೀನಾದೊಂದಿಗೆ ವ್ಯಾಪಾರ ಸಮರವು ಆ ದೇಶಕ್ಕಿಂತ ಭಾರತದ ಆರ್ಥಿಕತೆಗೇ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ.

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಿ ಪಡೆಗಳ ನಡುವೆ ಹಿಂಸಾತ್ಮಕ ಘರ್ಷಣೆಗಳ ಬಳಿಕ ಚೀನಿ ಆರ್ಥಿಕತೆಗೆ ಪೆಟ್ಟು ನೀಡಲು ಚೀನಾದಿಂದ ಆಮದುಗಳ ಮೇಲಿನ ಅವಲಂಬನೆಯನ್ನು ಭಾರತವು ತಗ್ಗಿಸಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಆದರೆ ಇಂತಹ ಯಾವುದೇ ನೀತಿಯನ್ನು ಭಾರತ ಸರಕಾರವು ಈವರೆಗೆ ಪ್ರಕಟಿಸಿಲ್ಲ.

ಭಾರತಕ್ಕೆ ಚೀನಾದಿಂದ ರಫ್ತು ಪ್ರಮಾಣವು ಅದರ ಒಟ್ಟು ರಫ್ತಿನ ಕೇವಲ ಶೇ.3ರಷ್ಟಿದೆ ಮತ್ತು ಇದು ಭಾರತದ ಒಟ್ಟು ಆಮದಿನ ಶೇ.15ರಷ್ಟಾಗುತ್ತದೆ ಎಂದು ಸುದ್ದಿ ಜಾಲತಾಣವೊಂದಕ್ಕೆ ನೀಡಿದ ಆಡಿಯೊ ಸಂದರ್ಶನದಲ್ಲಿ ಹೇಳಿದ ಜಾಗತಿಕ ವ್ಯಾಪಾರ ನೀತಿಯ ತಜ್ಞ ಹಾಗೂ ಕೊಲಂಬಿಯಾ ವಿವಿಯಲ್ಲಿ ಅರ್ಥಶಾಸ್ತ್ರ ಬೋಧಕರಾಗಿರುವ ಪನಗಾರಿಯಾ,

‘ಇವು ನಮ್ಮ ಪಾಲಿಗೆ ಮಹತ್ವದ ಆಮದುಗಳಾಗಿವೆ. ಇವುಗಳನ್ನು ನಾವು ನಿರ್ಬಂಧಿಸಿದರೆ ಅದು ನಮ್ಮ ತಯಾರಕರ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ’ಎಂದರು.

ಈ ಬಗ್ಗೆ ಇನ್ನಷ್ಟು ವಿವರಿಸಿದ ಅವರು,‘ಭಾರತವು ಚೀನಿ ಆಮದುಗಳ ಮೇಲೆ ನಿರ್ಬಂಧಗಳನ್ನು ಹೇರಿದರೆ ಅದಕ್ಕೆ ಪ್ರತಿಯಾಗಿ ಚೀನಾ ಕೂಡ ಭಾರತದಿಂದ ಆಮದುಗಳ ಮೇಲೆ ನಿರ್ಬಂಧಗಳನ್ನು ಹೇರುತ್ತದೆ ಎನ್ನುವುದನ್ನು ಯಾರೂ ತರ್ಕಿಸಬಹುದು. ಇದು ನಿಜಕ್ಕೂ ನಮಗೆ ಘಾಸಿಯನ್ನುಂಟು ಮಾಡಲಿದೆ. ನಮ್ಮ ಒಟ್ಟು ರಫ್ತುಗಳ ಶೇ.6ರಷ್ಟು ಚೀನಾವನ್ನು ಸೇರುತ್ತದೆ. ಹೀಗಾಗಿ ತುಲನಾತ್ಮಕವಾಗಿ ಮತ್ತು ನಿರ್ದಿಷ್ಟವಾಗಿ ಉಭಯ ದೇಶಗಳ ಆರ್ಥಿಕತೆಗಳ ಗಾತ್ರದಲ್ಲಿಯ ವ್ಯತ್ಯಾಸಗಳನ್ನು ಪರಿಗಣಿಸಿದರೆ ಈ ಕ್ರಮವು ಚೀನಿ ಆಮದುಗಳ ಮೇಲೆ ನಮ್ಮ ನಿರ್ಬಂಧಗಳಿಗಿಂತ ಹೆಚ್ಚಿನ ಹಾನಿಯನ್ನು ನಮ್ಮ ರಫ್ತುಗಳಿಗೆ ಮಾಡುತ್ತದೆ ’ಎಂದರು.

ಭಾರತೀಯ ಆರ್ಥಿಕತೆಯ ಪಾಲಿಗೆ ತುಂಬ ನಾಜೂಕಾಗಿರುವ ಈ ನಿರ್ದಿಷ್ಟ ಸಮಯದಲ್ಲಿ ಚೀನದ ವಿರುದ್ಧ ವ್ಯಾಪಾರ ಸಮರಕ್ಕೆ ಕರೆಗಳು ಕೇಳಿ ಬರುತ್ತಿವೆ ಮತ್ತು ಇದು ಭಾರತೀಯ ಆರ್ಥಿಕತೆಯನ್ನು ಹಲವಾರು ವರ್ಷಗಳ ಹಿಂದಕ್ಕೊಯ್ಯಬಹುದು ಎಂದು ವಾದಿಸಿದ ಪನಗಾರಿಯಾ, ‘ಕೋವಿಡ್-19 ದಾಳಿಯಿಡುವ ಮೊದಲೂ ಹಿಂದಿನ ಹಲವಾರು ವರ್ಷಗಳ ಶೇ.7ಕ್ಕೆ ಹೋಲಿಸಿದರೆ ನಮ್ಮ ಪ್ರಗತಿದರ ಕೇವಲ ಸುಮಾರು ಶೇ.4.2ರಷ್ಟಿತ್ತು. ಕೋವಿಡ್-19 ಪಿಡುಗು ಆರಂಭಗೊಂಡಾಗ ನಾವು ನಿಧಾನವಾಗಿ ಮಂದಗತಿಯಿಂದ ಹೊರಬರುತ್ತಿದ್ದೆವು ’ಎಂದರು.

ಕೋವಿಡ್-19 ಮತ್ತು ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆಗೆ ಈ ಹಿಂದೆಂದೂ ಕಂಡಿರದ ಮತ್ತು ಮುಂದೆಂದೂ ಕಾಣದಿರಬಹುದಾದ ಆಘಾತವುಂಟಾಗಿದೆ ಎಂದ ಅವರು, ಇಂತಹ ಕಾಲಘಟ್ಟದಲ್ಲಿ ಚೀನಾದ ವಿರುದ್ಧ ವ್ಯಾಪಾರ ಸಮರವು ಭಾರತದ ಆರ್ಥಿಕತೆಗೆ ಹೊಡೆತವನ್ನು ನೀಡುತ್ತದೆ. ವ್ಯಾಪಾರ ವಿವಾದದ ಮೂಲಕ ನಾವು ಇನ್ನೊಂದು ಆಘಾತವನ್ನು ಹೇರಿದರೆ ಆರ್ಥಿಕತೆಯನ್ನು ಶೇ.7 ಮತ್ತು ಶೇ.7.5 ಪ್ರಗತಿ ದರಕ್ಕೆ ಮರಳಿ ತರುವುದು ಅಸಾಧ್ಯವಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News