ಕ್ವಿಂಟನ್ ಡಿ ಕಾಕ್‌ಗೆ ಸಿಎಸ್‌ಎ ವರ್ಷದ ಕ್ರಿಕೆಟಿಗ ಪ್ರಶಸ್ತಿ

Update: 2020-07-05 18:32 GMT

ಜೋಹಾನ್ಸ್‌ಬರ್ಗ್ , ಜು.5: ದಕ್ಷಿಣ ಆಫ್ರಿಕಾದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಕ್ವಿಂಟನ್ ಡಿ ಕಾಕ್ ಸಿಎಸ್‌ಎ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಮತ್ತು ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಲಾರಾ ವೊಲ್ವಾರ್ಡ್ ಆಯ್ಕೆಯಾಗಿದ್ದಾರೆ.

 ಕ್ವಿಂಟನ್ ಡಿ ಕಾಕ್ ಅವರಿಗೆ 2017ರ ನಂತರದ ಎರಡನೇ ಗೌರವವಾಗಿದೆ.

ಆರಂಭಿಕ ಬ್ಯಾಟ್ಸ್‌ವುಮೆನ್ ಲಾರಾ ವೊಲ್ವಾರ್ಡ್ ವರ್ಷದ ಮಹಿಳಾ ಕ್ರಿಕೆಟರ್ ಮತ್ತು ವರ್ಷದ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೇಗದ ಬೌಲರ್ ಲುಂಗಿ ಗಿಡಿ ವರ್ಷದ ಏಕದಿನ ಮತ್ತು ಟ್ವೆಂಟಿ-20 ಆಟಗಾರ ಪ್ರಶಸ್ತಿಗೆ ಆಯ್ಕೆಯಾದರೆ, ಡೇವಿಡ್ ಮಿಲ್ಲರ್ ಅವರನ್ನು ಅಭಿಮಾನಿಗಳ ನೆಚ್ಚಿನ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪುರುಷರ ತಂಡದ ಅನ್ರಿಕ್ ನಾರ್ಟ್ಜೆ ಅವರನ್ನು ವರ್ಷದ ಹೊಸ ಆಟಗಾರ ಎಂದು ಘೋಷಿಸಲಾಗಿದೆ. ಶಬ್ನಿಮ್ ಇಸ್ಮಾಯಿಲ್ ವರ್ಷದ ಮಹಿಳಾ ಟ್ವೆಂಟಿ-20 ಆಟಗಾರ್ತಿಯಾಗಿದ್ದರೆ, ಎಡಗೈ ಸ್ಪಿನ್ನರ್ ನೊನ್ಕುಲುಲೆಕೊ ಮಲಾಬಾ ಅವರು ವರ್ಷದ ಹೊಸ ಆಟಗಾರ್ತಿಯಾಗಿ ಆಯ್ಕೆಯಾದರು.

►ಎಲೈಟ್ ಕ್ಲಬ್

ಶನಿವಾರ ರಾತ್ರಿ ಡಿ ಕಾಕ್ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೌರವದೊಂದಿಗೆ ಗಣ್ಯರ ಕ್ಲಬ್ ಸೇರಿಕೊಂಡರು. ಈ ಹಿಂದೆ ಪ್ರಶಸ್ತಿ ಪಡೆದವರ ವಿವರ ಇಂತಿವೆ.

 ಜಾಕ್ ಕಾಲಿಸ್ (2004 ಮತ್ತು 2011), ಮಖಾಯಾ ಎನ್ಟಿನಿ (2005 ಮತ್ತು 2006), ಹಾಶಿಮ್ ಅಮ್ಲ (2010 ಮತ್ತು 2013), ಎಬಿ ಡಿವಿಲಿಯರ್ಸ್ (2014 ಮತ್ತು 2015) ಮತ್ತು ಕಾಗಿಸೊ ರಬಾಡ (2016 ಮತ್ತು 2018).

 2004ರಲ್ಲಿ ಪ್ರಶಸ್ತಿಗಳನ್ನು ನೀಡಲು ಆರಂಭಿಸಿದ ನಂತರ ವಿಜೇತರು: ಶಾನ್ ಪೊಲಾಕ್ (2007), ಡೇಲ್ ಸ್ಟೇನ್ (2008), ಗ್ರೇಮ್ ಸ್ಮಿತ್ (2009), ವೆರ್ನಾನ್ ಫಿಲ್ಯಾಂಡರ್ (2012) ಮತ್ತು ಎಫ್ ಡು ಪ್ಲೆಸಿಸ್ (2019).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News