ಭೂತಾನ್ ಜತೆ ಗಡಿ ವಿವಾದ ಕೆದಕಿ ಪರೋಕ್ಷವಾಗಿ ಮತ್ತೆ ಭಾರತವನ್ನು ಗುರಿ ಮಾಡುತ್ತಿರುವ ಚೀನಾ?

Update: 2020-07-06 07:43 GMT

ಹೊಸದಿಲ್ಲಿ: ಭೂತಾನ್ ದೇಶದೊಂದಿಗಿನ ತನ್ನ ಪೂರ್ವ ಗಡಿ ಪ್ರದೇಶದಲ್ಲಿನ ಕೆಲ ಭೂಭಾಗಗಳನ್ನು ತನ್ನದೆಂದು ಹೇಳಿಕೊಳ್ಳುವ ಮೂಲಕ ಚೀನಾ ಮತ್ತೊಮ್ಮೆ ಭಾರತವನ್ನು ಪರೋಕ್ಷವಾಗಿ ಗುರಿ ಮಾಡುತ್ತಿದೆ ಎನ್ನಲಾಗಿದೆ.

ಪೂರ್ವ ಭೂತಾನ್‍ ನ ತ್ರಾಶಿಗಾಂಗ್ ಜಿಲ್ಲೆಯಲ್ಲಿ ಸಕ್ತೆಂಗ್ ವನ್ಯಜೀವಿ ಧಾಮದ ಅಭಿವೃದ್ಧಿಗಾಗಿ ಗ್ಲೋಬಲ್ ಎನ್ವಿರಾನ್ಮೆಂಟ್ ಫೆಸಿಲಿಟಿಯ ಆನ್ಲೈನ್ ಸಭೆಯಲ್ಲಿ ಮಾಡಲಾದ ಮನವಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಪರಿಸರ ಯೋಜನೆಗಳಿಗೆ ಹಣಕಾಸು ಸಹಾಯ ಒದಗಿಸುವ ಅಮೆರಿಕಾ ಮೂಲದ ಸಂಸ್ಥೆ ಇದಾಗಿದೆ,.

ಸಭೆಯಲ್ಲಿ ಭೂತಾನ್ ಚೀನಾದ  ಹೇಳಿಕೆಯನ್ನು ವಿರೋಧಿಸಿದೆ ಹಾಗೂ ಸಭೆಯು ಯೋಜನೆಗೆ ಹಣಕಾಸು ಸಹಾಯ ಒದಗಿಸುವುದಕ್ಕೆ ಅನುಮೋದನೆ ನೀಡಿದೆಯಾದರೂ ಸಭೆಯ ನಡಾವಳಿಯಲ್ಲಿ ಭೂತಾನ್ ಮತ್ತು ಚೀನಾದ ಹೇಳಿಕೆಗಳು ದಾಖಲುಗೊಂಡಿವೆ.

ಸಭೆಯ ನಡಾವಳಿಗಳಲ್ಲಿ ದಾಖಲಾಗಿರುವ ಮಾಹಿತಿಯಂತೆ ಸಕ್ತೆಂಗ್ ವನ್ಯಜೀವಿ ಧಾಮವು ಚೀನಾ-ಭೂತಾನ್ ವಿವಾದಿತ ಪ್ರದೇಶದಲ್ಲಿದ್ದು ಹಾಗೂ ಚೀನಾ-ಭೂತಾನ್ ಗಡಿ ಮಾತುಗತೆಗಳ ಅಜೆಂಡಾದ ಭಾಗವಾಗಿರುವುದರಿಂದ ಈ ಯೋಜನೆಗೆ  ಸಂಸ್ಥೆ ಹಣಕಾಸು ಸಹಾಯ ಒದಗಿಸುವುದನ್ನು ತಾನು ವಿರೋಧಿಸುವುದಾಗಿ ಚೀನಾ ಹೇಳಿರುವುದು ದಾಖಲಾಗಿದೆ.

ಆದರೆ ಸಭೆಯಲ್ಲಿ ಭೂತಾನ್  ಈ ವಾದವನ್ನು ನಿರಾಕರಿಸಿದೆಯಲ್ಲದೆ ಈ ವನ್ಯಜೀವಿ ಧಾಮ ಸಂಪೂರ್ಣವಾಗಿ ಭೂತಾನ್ ಭೂಭಾಗದಲ್ಲಿದೆ ಹಾಗೂ ಗಡಿ ಸಂಬಂಧಿತ ಯಾವುದೇ ಮಾತುಕತೆಗಳ ವೇಳೆ ಇದನ್ನು ವಿವಾದಿತ ಸ್ಥಳವೆಂದು ನಮೂದಿಸಲಾಗಿಲ್ಲ ಎಂದು ಹೇಳಿದೆ.

ಆದರೆ ಚೀನಾದ  ಈ ಹೇಳಿಕೆಯು  ಭೂತಾನ್ ದೇಶದ ಮಿತ್ರ ದೇಶವಾಗಿರುವ ಭಾರತವನ್ನು ಗುರಿಯಾಗಿಸಿದೆ ಹಾಗೂ ಭೂತಾನ್‍ನ ಪೂರ್ವ ಪ್ರದೇಶವು  ಚೀನಾ ತನ್ನದೆಂದು ಹೇಳಿಕೊಳ್ಳುತ್ತಿರುವ ಅರುಣಾಚಲ ಪ್ರದೇಶಕ್ಕೆ ಹತ್ತಿರವಾಗಿರುವುದೇ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News