5ನೇ ತರಗತಿವರೆಗೆ ಆನ್‍ಲೈನ್ ತರಗತಿ ನಿಷೇಧ ವಿಚಾರ: ವಕೀಲರ ವಾದ ಆಲಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2020-07-06 12:26 GMT

ಬೆಂಗಳೂರು, ಜು.6: ಎಲ್‍ಕೆಜಿಯಿಂದ 5ನೆ ತರಗತಿವರೆಗಿನ ಮಕ್ಕಳಿಗೆ ಆಲ್‍ಲೈನ್ ತರಗತಿಗಳನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಎರಡು ಕಡೆಯ ವಕೀಲರ ವಾದವನ್ನು ಆಲಿಸಿ ಜು.7ಕ್ಕೆ ತೀರ್ಪುನ್ನು ಕಾಯ್ದಿರಿಸಿದೆ.

ಎಲ್‍ಕೆಜಿಯಿಂದ 5ನೆ ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಪೋಷಕರು ಮತ್ತು ಕೆಲ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ರಾಜ್ಯ ಸರಕಾರ ಆನ್‍ಲೈನ್ ಕ್ಲಾಸ್‍ಗಳ ವಿರುದ್ಧವಾಗಿಲ್ಲ. ತಜ್ಞರ ಸಮಿತಿ ವರದಿ ಸಲ್ಲಿಕೆಯಾಗುವವರೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಸದ್ಯ ಮಕ್ಕಳ ಶಿಕ್ಷಣಕ್ಕಿಂತ ಅವರ ಆರೋಗ್ಯದ ಕಾಳಜಿ ಸರಕಾರದ ಆದ್ಯತೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಸಂವಿಧಾನದ ಕಲಂ 126ರ ಅನ್ವಯ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 5(2)ರಡಿ ಅಧಿಕಾರ ಚಲಾಯಿಸಿ ಸರಕಾರ ನಿರ್ಧಾರ ಕೈಗೊಂಡಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರು, ಬೇರೆ ರಾಜ್ಯಗಳಲ್ಲಿ ಆನ್‍ಲೈನ್ ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಆನ್‍ಲೈನ್ ತರಗತಿಗಳನ್ನು ನಿಷೇಧಿಸಲಾಗಿದೆ. ಇದು ಕಾನೂನು ಬಾಹಿರವಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಕೊರೋನ ಕಾರಣದಿಂದ ಶಾಲಾ, ಕಾಲೇಜುಗಳು ಬಂದ್ ಆಗಿದ್ದು, ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆರಂಭಿಸಿದ್ದವು. ಆದರೆ ಖಾಸಗಿ ಶಾಲೆಗಳ ಕ್ರಮಕ್ಕೆ ತಡೆ ಹಾಕಿದ ರಾಜ್ಯ ಸರಕಾರ ಎಲ್‍ಕೆಜಿಯಿಂದ 5ನೆ ತರಗತಿವರೆಗೂ ಆನ್‍ಲೈನ್ ಶಿಕ್ಷಣ ನಡೆಸದಂತೆ ಸೂಚನೆ ನೀಡಿ ಆದೇಶ ಜಾರಿ ಮಾಡಿತ್ತು. ಸರಕಾರದ ಕ್ರಮ ಪ್ರಶ್ನಿಸಿದ ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News